ಹೊಳೆನರಸೀಪುರ: ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಹಾಸನ ಜಿಲ್ಲಾ ಘಟಕ ಹಾಗೂ ಕದಂಬ ಸೇನೆ ಹೊಳೆನರಸೀಪುರ ತಾಲ್ಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ಹೊಳೆನರಸೀಪುರ ತಾಲ್ಲೂಕಿನ ರಾಮೇನಹಳ್ಳಿಯ ಕಲ್ಕಿ ಪರಂಜ್ಯೋತಿ ದೇವಸ್ಥಾನದಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿ, ರಂಗಗೀತೆ ಗಾಯನ ಹಾಗೂ ಖ್ಯಾತ ನಾಟಕಕಾರ ದಿವಂಗತ ಬಿ. ಪುಟ್ಟಸ್ವಾಮಯ್ಯ ಅವರ ಬದುಕು-ಬರಹ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಮೇ 24, 2026ರ ಭಾನುವಾರ ಆಯೋಜಿಸಲಾಗಿದೆ.
ಅರಕಲಗೂಡು ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎ. ಮಂಜು ಅವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ.
ದಿವಂಗತ ನಾಟಕಕಾರ ಬಿ. ಪುಟ್ಟಸ್ವಾಮಯ್ಯ ಅವರ 129ನೇ ವರ್ಷದ ಜನ್ಮದಿನ ಪುಣ್ಯಸ್ಮರಣೆಯ ಅಂಗವಾಗಿ ಅವರ ಬದುಕು ಮತ್ತು ಬರಹಗಳ ಕುರಿತು ಕವಿ ಹಾಗೂ ನಾಟಕಕಾರ ಗೊರೂರು ಅನಂತರಾಜು ಉಪನ್ಯಾಸ ನೀಡಲಿದ್ದಾರೆ. “ಛಲದೊಳ್ ದುರ್ಯೋಧನಂ” ನಾಟಕ ಕುರಿತು ಪ್ರೊ. ಎ.ಎಚ್. ಗಣೇಶ್ ಅಂಕಪುರ ಹಾಗೂ “ಕುರುಕ್ಷೇತ್ರ” ನಾಟಕ ಕುರಿತು ಡಾ. ಬರಾಳು ಶಿವರಾಮ ಉಪನ್ಯಾಸ ನೀಡಲಿದ್ದಾರೆ.
ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧು ನಾಯ್ಕ ಲಂಬಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕದಂಬ ಸೇನೆ ಹೊಳೆನರಸೀಪುರ ತಾಲ್ಲೂಕು ಅಧ್ಯಕ್ಷ ರಾಮೇನಹಳ್ಳಿ ಪುಟ್ಟಸ್ವಾಮಿಗೌಡ ಪ್ರಾಸ್ತಾವಿಕ ನುಡಿ ನೀಡಲಿದ್ದಾರೆ. ಕರ್ನಾಟಕ ರಾಜ್ಯ ಬರಹಗಾರರ ಸಂಘ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಸುಂದರೇಶ್ ಡಿ. ಉಡುಗೊರೆ ಶುಭನುಡಿ ಮಾತನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರುತಿಕುಮಾರ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಓಡನಹಳ್ಳಿ, ಬೇಕ್ರಿ ರಮೇಶ್, ಕದಂಬ ಸೇನೆ ರಾಜ್ಯಾಧ್ಯಕ್ಷ ಮಂಡ್ಯ, ಬಾ.ನಂ. ಲೋಕೇಶ್, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸನ, ನಾಟಕಕಾರ ಎಸ್.ಎಸ್. ಪುಟ್ಟೇಗೌಡ, ಕವಿ ಎನ್.ಎಲ್. ಚನ್ನೇಗೌಡ ಹಾಗೂ ಹೊಳೆನರಸೀಪುರ ತಾಲೂಕು ಬರಹಗಾರರ ಸಂಘದ ಅಧ್ಯಕ್ಷ ಡಾ. ಲೋಕೇಶ್ ಭಾಗವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಆರ್. ವಿಜಯಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದು, ದಿಬ್ಬೂರು ರಮೇಶ್ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಕೇಶವ ಜಿ.ಜಿ. ಸ್ವಾಗತ ಕೋರಿ, ಬೇಕ್ರಿ ರಾಜೇಗೌಡ ವಂದನಾರ್ಪಣೆ ನೆರವೇರಿಸಲಿದ್ದಾರೆ.
ರಂಗಗೀತೆ ಗಾಯನ ಹಾಗೂ ಕವಿಗೋಷ್ಠಿಯಲ್ಲಿ ಭಾಗವಹಿಸಲು ಈಗಾಗಲೇ 60ಕ್ಕೂ ಹೆಚ್ಚು ಗಾಯಕರು ಮತ್ತು ಕವಿಗಳು ಹೆಸರು ನೋಂದಾಯಿಸಿಕೊಂಡಿರುವುದಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಆರ್. ವಿಜಯಕುಮಾರ್ ತಿಳಿಸಿದ್ದಾರೆ.
