ಬೆಂಗಳೂರು, ಮೇ 25: ಕಿರುತೆರೆ ಹಾಗೂ ಬಿಗ್ಬಾಸ್ ಕನ್ನಡ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಖ್ಯಾತ ನಿರೂಪಕಿ ಅವರು ಇದೀಗ ರಾಜಕೀಯ ಕ್ಷೇತ್ರಕ್ಕೆ ಅಧಿಕೃತವಾಗಿ ಪ್ರವೇಶಿಸಿದ್ದಾರೆ. ಹಲವು ವರ್ಷಗಳಿಂದ ಮನರಂಜನಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಜಾಹ್ನವಿ, ಜನತಾದಳ (ಜಾತ್ಯತೀತ) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ತಮ್ಮ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಬೆಂಗಳೂರಿನ ಜೆ.ಪಿ. ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಹ್ನವಿ ಅವರು ಜೆಡಿಎಸ್ನ ಪ್ರಾಥಮಿಕ ಸದಸ್ಯತ್ವವನ್ನು ಸ್ವೀಕರಿಸಿದರು. ಈ ವೇಳೆ ಕೇಂದ್ರ ಸಚಿವರು ಹಾಗೂ ಜೆಡಿಎಸ್ ಹಿರಿಯ ನಾಯಕ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಕುಮಾರಸ್ವಾಮಿ ಅವರು ಪಕ್ಷದ ಶಾಲು ಹೊದಿಸಿ, ಧ್ವಜ ಹಸ್ತಾಂತರಿಸುವ ಮೂಲಕ ಜಾಹ್ನವಿ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಈಟಿವಿ ಸೇರಿದಂತೆ ಹಲವು ಪ್ರಮುಖ ವಾಹಿನಿಗಳಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಜಾಹ್ನವಿ, ಬಳಿಕ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಅಪಾರ ಜನಪ್ರಿಯತೆ ಪಡೆದಿದ್ದರು. ತಮ್ಮ ಮಾತುಗಾರಿಕೆ, ಚಾಣಾಕ್ಷತನ ಹಾಗೂ ವ್ಯಕ್ತಿತ್ವದಿಂದ ಪ್ರೇಕ್ಷಕರ ಮನಗೆದ್ದಿದ್ದ ಅವರು, ನಂತರ ಹಲವು ಟಿವಿ ಕಾರ್ಯಕ್ರಮಗಳು ಹಾಗೂ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಜಾಹ್ನವಿ, ಜೆಡಿಎಸ್ ತತ್ವ ಸಿದ್ಧಾಂತಗಳು ಹಾಗೂ ಕುಮಾರಸ್ವಾಮಿ ಅವರ ನಾಯಕತ್ವದಿಂದ ಪ್ರೇರಿತವಾಗಿ ಪಕ್ಷ ಸೇರಿರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗಾಗಿ ಶ್ರಮಿಸುವುದಾಗಿ ಅವರು ಭರವಸೆ ನೀಡಿದರು.
ಯುವ ನಾಯಕರು ಹಾಗೂ ಮಹಿಳೆಯರಿಗೆ ಜೆಡಿಎಸ್ನಲ್ಲಿ ಉತ್ತಮ ಅವಕಾಶ ಸಿಗುತ್ತಿರುವ ಹಿನ್ನೆಲೆಯಲ್ಲಿ ಜಾಹ್ನವಿ ಅವರ ಸೇರ್ಪಡೆ ಪಕ್ಷದಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಕಿರುತೆರೆಯಲ್ಲಿ ಯಶಸ್ಸು ಕಂಡಿದ್ದ ಅವರು, ರಾಜಕೀಯ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಲಾರರೇ ಎಂಬ ಕುತೂಹಲ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.
