ಇಂದಿನ ಯುವಜನತೆ ದೇಶದ ಶಕ್ತಿ ಎಂಬುದು ಎಲ್ಲರೂ ಒಪ್ಪುವ ಸತ್ಯ. ಆದರೆ ಇದೇ ಯುವ ಸಮುದಾಯ ಇಂದು ಅನೇಕ ಸವಾಲುಗಳು ಮತ್ತು ಒತ್ತಡಗಳ ನಡುವೆ ಬದುಕು ಕಟ್ಟಿಕೊಳ್ಳಲು ಹೋರಾಟ ನಡೆಸುತ್ತಿದೆ. ಶಿಕ್ಷಣ, ಉದ್ಯೋಗ, ತಂತ್ರಜ್ಞಾನ ಹಾಗೂ ಸಾಮಾಜಿಕ ಬದಲಾವಣೆಗಳ ನಡುವೆಯೇ ಯುವಕರ ಜೀವನ ಹೊಸ ದಿಕ್ಕಿನತ್ತ ಸಾಗುತ್ತಿದ್ದರೂ, ಅವರ ಮನಸ್ಸಿನಲ್ಲಿ ಆತಂಕ ಮತ್ತು ಅನಿಶ್ಚಿತತೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.
ಮೊಬೈಲ್ ಫೋನ್ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವ ಯುವಕರ ಬದುಕಿನಲ್ಲಿ ಬಹಳಷ್ಟು ಹೆಚ್ಚಾಗಿದೆ. ಮಾಹಿತಿ ಮತ್ತು ಜ್ಞಾನ ಪಡೆಯಲು ಇವು ಸಹಾಯಕವಾದರೂ, ಅತಿಯಾದ ಬಳಕೆ ಏಕಾಗ್ರತೆ ಕುಗ್ಗಿಸುವ ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಕೆಲ ಯುವಕರು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳುವುದಕ್ಕಿಂತ ಇತರರ ಜೀವನಶೈಲಿಯನ್ನು ಹೋಲಿಕೆ ಮಾಡುವ ಪ್ರವೃತ್ತಿಗೆ ಒಳಗಾಗುತ್ತಿದ್ದಾರೆ.
ಉದ್ಯೋಗ ಸಮಸ್ಯೆಯೂ ಇಂದಿನ ಯುವಜನತೆಯ ದೊಡ್ಡ ಸವಾಲಾಗಿದೆ. ಉನ್ನತ ಶಿಕ್ಷಣ ಪಡೆದರೂ ಉದ್ಯೋಗ ಸಿಗದ ಪರಿಸ್ಥಿತಿ ಅನೇಕ ಕುಟುಂಬಗಳಲ್ಲಿ ನಿರಾಶೆ ಮೂಡಿಸಿದೆ. ಸರ್ಕಾರಿ ಉದ್ಯೋಗಗಳ ಕೊರತೆ ಹಾಗೂ ಖಾಸಗಿ ಕ್ಷೇತ್ರದಲ್ಲಿನ ತೀವ್ರ ಸ್ಪರ್ಧೆ ಯುವಕರ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತಿದೆ.
ಆದರೂ ಇಂದಿನ ಯುವಜನತೆಯ ಚಿತ್ರಣ ಸಂಪೂರ್ಣ ನಕಾರಾತ್ಮಕವಲ್ಲ. ಹೊಸ ಆಲೋಚನೆಗಳನ್ನು ಸ್ವೀಕರಿಸುವಲ್ಲಿ ಯುವಕರು ಮುಂಚೂಣಿಯಲ್ಲಿದ್ದಾರೆ. ಸ್ಟಾರ್ಟ್ಅಪ್, ಡಿಜಿಟಲ್ ಉದ್ಯಮ, ಕೃಷಿಯಲ್ಲಿ ಹೊಸ ಪ್ರಯೋಗಗಳು ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಯುವಕರೂ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಅವಕಾಶಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.
ಯುವಜನತೆಗೆ ಸರಿಯಾದ ಮಾರ್ಗದರ್ಶನ, ಕೌಶಲ್ಯಾಭಿವೃದ್ಧಿ ಹಾಗೂ ಮಾನಸಿಕ ಬೆಂಬಲ ದೊರೆತರೆ ದೇಶದ ಭವಿಷ್ಯ ಮತ್ತಷ್ಟು ಬಲವಾಗಲಿದೆ. ಕುಟುಂಬ, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರ—allರೂ ಸೇರಿ ಯುವಕರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಬೇಕಾಗಿದೆ.
ಒಟ್ಟಿನಲ್ಲಿ, ಇಂದಿನ ಯುವಜನತೆ ಅನೇಕ ಸಮಸ್ಯೆಗಳ ನಡುವೆ ಬದುಕುತ್ತಿದ್ದರೂ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಸರಿಯಾದ ದಿಕ್ಕು ಮತ್ತು ಅವಕಾಶ ದೊರೆತರೆ ಇದೇ ಯುವಶಕ್ತಿ ಸಮಾಜ ಪರಿವರ್ತನೆಯ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಬಹುದು.
— ನೇತ್ರ ವೇಣುಗೋಪಾಲ್
ಕೊರಟಗೆರೆ.
