ಕೊರಟಗೆರೆ: ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗಾಗಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆ ನೂತನ ಕಛೇರಿ ಉದ್ಘಾಟನೆ ಹಾಗೂ ಹಿರಿಯ ಕಟ್ಟಡ ಕಾರ್ಮಿಕರ ಸನ್ಮಾನ ಕಾರ್ಯಕ್ರಮವೂ ನಡೆಯಿತು.
ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀಕಾಂತ್ ಮಾತನಾಡಿ, “ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಂಡರೆ ಶೈಕ್ಷಣಿಕ ನೆರವು, ಮದುವೆ ಸಹಾಯಧನ, ವೈದ್ಯಕೀಯ ಸೌಲಭ್ಯ, ಪಿಂಚಣಿ ಹಾಗೂ ಅಪಘಾತ ಪರಿಹಾರ ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿವೆ.
ಅಸಂಘಟಿತ ಕಾರ್ಮಿಕರು ಕಡ್ಡಾಯವಾಗಿ ಇ-ಶ್ರಮ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು” ಎಂದು ತಿಳಿಸಿದರು.
ಕಾರ್ಮಿಕರಿಗೆ ಸ್ಥಳೀಯ ಮಟ್ಟದಲ್ಲೇ ಸೌಲಭ್ಯ ದೊರಕುವ ಉದ್ದೇಶದಿಂದ ಆರಂಭಿಸಲಾದ ನೂತನ ಕಛೇರಿಯನ್ನು ಗಣ್ಯರು ಉದ್ಘಾಟಿಸಿದರು. ಇದರಿಂದ ನೋಂದಣಿ ಹಾಗೂ ವಿವಿಧ ಸೌಲಭ್ಯಗಳಿಗಾಗಿ ಜಿಲ್ಲಾ ಕೇಂದ್ರಕ್ಕೆ ತೆರಳುವ ಅವಶ್ಯಕತೆ ತಪ್ಪಲಿದೆ ಎಂದು ಸಂಘಟಕರು ಹೇಳಿದರು.

ಇದೇ ವೇಳೆ ಮಾತನಾಡಿದ ಐಎನ್ಟಿಯುಸಿ ರಾಜ್ಯಾಧ್ಯಕ್ಷ ಶಾಮಣ್ಣರೆಡ್ಡಿ, ಕಾರ್ಮಿಕರ ಹಕ್ಕುಗಳು ಮತ್ತು ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆದರು. ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಠ ₹26 ಸಾವಿರ ವೇತನ ನಿಗದಿ ಮಾಡಬೇಕು. ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಎಲ್ಲ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಇಎಸ್ಐ ಹಾಗೂ ಪಿಎಫ್ ಸೌಲಭ್ಯವನ್ನು ಎಲ್ಲ ಕಾರ್ಮಿಕರಿಗೆ ವಿಸ್ತರಿಸಬೇಕು. ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
“ಕಾರ್ಮಿಕರಲ್ಲಿ ಅರಿವು ಮೂಡಿಸುವುದೇ ನಮ್ಮ ಮೊದಲ ಕೆಲಸ. ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದಾಗ ಮಾತ್ರ ಶೋಷಣೆಯನ್ನು ತಡೆಗಟ್ಟಲು ಸಾಧ್ಯ. ಸಂಘಟಿತ ಹೋರಾಟದ ಮೂಲಕವೇ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಎನ್ಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ, ವಿ.ದಾಸ್, ಫೈರೋಜ್ ಪಾಷ, ರಮೇಶ್, ಗೋವಿಂದರಾಜು, ಡಿಎಸ್ಎಸ್ ನರಸಿಂಹಮೂರ್ತಿ, ಗುರುಮೂರ್ತಿ, ಮಂಜುನಾಥ್, ಸಿದ್ದರಾಜು, ಆನಂದ್ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ನೂರಾರು ಕಾರ್ಮಿಕರು ಭಾಗವಹಿಸಿದ್ದರು.
– ಶ್ರೀನಿವಾಸ್ ಕೊರಟಗೆರೆ.
