ಕೊರಟಗೆರೆ: ಬಹು ವರ್ಷಗಳ ಬೇಡಿಕೆಯಾಗಿದ್ದ, ಇತಿಹಾಸ ಪ್ರಸಿದ್ಧ ಹಾಗೂ ಲಕ್ಷಾಂತರ ರೈತರ ಜೀವನಾಡಿಯಾದ ಮಾವತ್ತೂರು ಕೆರೆಯ ಸಮೀಪದ ಅರಸೇಶ್ವರಿ ಅಥವಾ ಮಾವತ್ತೂರಮ್ಮ ದೇವಸ್ಥಾನದ ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಭವ್ಯ ಸಮುದಾಯ ಭವನ ಇದೀಗ ಲೋಕಾರ್ಪಣೆಗೆ ಸಜ್ಜಾಗಿದೆ.
ಅರಸೇಶ್ವರಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ಅವರು ತಮ್ಮ ತಂದೆ-ತಾಯಿಗಳ ಸ್ಮರಣಾರ್ಥ ಈ ಸಮುದಾಯ ಭವನವನ್ನು ಸಾರ್ವಜನಿಕ ಬಳಕೆಗೆ ಅರ್ಪಿಸುತ್ತಿದ್ದಾರೆ.
ತಾಲೂಕಿನ ಮಾವತ್ತೂರು ಗ್ರಾಮದ ಹೊರವಲಯದಲ್ಲಿರುವ ಇತಿಹಾಸ ಪ್ರಸಿದ್ಧ ಅರಸೇಶ್ವರಿ ಮಾತ್ತೂರಮ್ಮ ದೇವಸ್ಥಾನದಲ್ಲಿ ಪ್ರತಿವರ್ಷವೂ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಸುಮಾರು 38ಕ್ಕೂ ಹೆಚ್ಚು ಗ್ರಾಮಗಳ ಭಕ್ತರು ಇಲ್ಲಿ ಸೇರಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಆದರೆ, ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಮತ್ತು ಗ್ರಾಮಸ್ಥರಿಗೆ ಶುಭಕಾರ್ಯಗಳನ್ನು ನಡೆಸಲು ಸೂಕ್ತ ಸಮುದಾಯ ಭವನದ ಕೊರತೆ ಹಲವು ವರ್ಷಗಳಿಂದ ಕಾಡುತ್ತಿತ್ತು. ಈ ಅಗತ್ಯವನ್ನು ಮನಗಂಡು, ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಶ್ರೀಮತಿ ಹನುಮಕ್ಕ ಹಾಗೂ ಪಿ.ಎನ್. ನರಸಿಂಹಯ್ಯ ಅವರ ಸ್ಮರಣಾರ್ಥ ಈ ಸಮುದಾಯ ಭವನ ನಿರ್ಮಿಸಲಾಗಿದೆ.
ಈ ಕುರಿತು ಮಾತನಾಡಿದ ಪಿ.ಎನ್. ಕೃಷ್ಣಮೂರ್ತಿ ಅವರು, ನಮ್ಮ ತಂದೆ-ತಾಯಿಯವರು ಸದಾ ಬಡವರಿಗೆ ಶಾಶ್ವತವಾಗಿ ಉಪಯೋಗವಾಗುವ ಕೆಲಸ ಮಾಡಬೇಕು ಎಂದು ಆಶಿಸುತ್ತಿದ್ದರು. ಅವರ ಕನಸಿನಂತೆ ಈ ಸಮುದಾಯ ಭವನ ನಿರ್ಮಾಣಗೊಂಡಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಬಡ ಜನರ ಶುಭಕಾರ್ಯಗಳಿಗೆ ಇದು ಅತ್ಯಂತ ಉಪಯೋಗವಾಗಲಿದೆ. ಜೊತೆಗೆ ಹೋಬಳಿ ಮಟ್ಟದಲ್ಲಿ ಗಾರ್ಮೆಂಟ್ಸ್ ಆರಂಭಿಸಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶವೂ ಇದೆ ಎಂದು ತಿಳಿಸಿದರು.
ಮಾವತ್ತೂರು ಮಂಜುನಾಥ್ ಮಾತನಾಡಿ ಇತಿಹಾಸ ಪ್ರಸಿದ್ಧ ಈ ದೇವಿಯ ಸನ್ನಿಧಿಗೆ ಅನೇಕ ರಾಜಕಾರಣಿಗಳು ಭೇಟಿ ನೀಡಿದ್ದಾರೆ. ಆದರೆ ಸಮುದಾಯ ಭವನ ನಿರ್ಮಿಸಲು ಯಾರೂ ಮುಂದಾಗಿರಲಿಲ್ಲ. ಇದೀಗ ಪಿ.ಎನ್. ಕೃಷ್ಣಮೂರ್ತಿ ಅವರು 50 ಲಕ್ಷ ರೂ. ವೆಚ್ಚದಲ್ಲಿ ಭವನ ನಿರ್ಮಿಸಿ ಬಡವರ ಶುಭಕಾರ್ಯಗಳಿಗೆ ನೆರವಾಗಿದ್ದಾರೆ. ಅವರಿಗೆ ರಾಜಕೀಯದಲ್ಲಿ ಇನ್ನಷ್ಟು ಬೆಳವಣಿಗೆ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಶ್ರೀಮತಿ ಚಂದ್ರಕಲಾ ಕೃಷ್ಣಮೂರ್ತಿ ಮಾತನಾಡಿ ಪ್ರತಿ ವರ್ಷವೂ ನಮ್ಮ ತೋಟದಲ್ಲಿ ಅರಸೇಶ್ವರಿ ತಾಯಿಯ ಸಮ್ಮುಖದಲ್ಲಿ ಭಕ್ತಿಭಾವದಿಂದ ಜಾತ್ರಾ ಮಹೋತ್ಸವ ನಡೆಸುತ್ತಾ ಬಂದಿದ್ದೇವೆ. ನಮ್ಮ ಅತ್ತೆಯವರ ಬಹುದಿನಗಳ ಕನಸಾಗಿದ್ದ ಸಮುದಾಯ ಭವನ ನಿರ್ಮಾಣಗೊಂಡಿರುವುದು ನಮ್ಮ ಕುಟುಂಬಕ್ಕೆ ಅಪಾರ ಸಂತೋಷ ತಂದಿದೆ. ಈ ಭವನವು ಮುಂದಿನ ದಿನಗಳಲ್ಲಿ ಬಡವರ ಶುಭಕಾರ್ಯಗಳಿಗೆ ಆಶ್ರಯವಾಗಲಿ, ಎಲ್ಲರ ಬದುಕಿನಲ್ಲಿ ಸಂತೋಷ ಮತ್ತು ಸೌಹಾರ್ದತೆ ಮೂಡಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪಿಎನ್ಕೆ ಅಭಿಮಾನಿ ಬಳಗದ ಯುವಕರು, ಕಾರ್ಯಕರ್ತರು, ಗ್ರಾಮದ ಮುಖಂಡರು ಹಾಗೂ ದೇವಸ್ಥಾನದ ಭಕ್ತಾದಿಗಳು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ
