ಚನ್ನರಾಯಪಟ್ಟಣ: ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ 2026-27ನೇ ಸಾಲಿಗೆ ಹೊಸದಾಗಿ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಜೇಶ್ ಚವ್ಹಾಣ ತಿಳಿಸಿದ್ದಾರೆ.
2026-27ನೇ ಶೈಕ್ಷಣಿಕ ಸಾಲಿನಲ್ಲಿ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಬಯಸುವ ಪ್ರವರ್ಗ-1, ಎಸ್.ಸಿ ಹಾಗೂ ಎಸ್.ಟಿ ಸಮುದಾಯದ ವಿದ್ಯಾರ್ಥಿಗಳು ಮತ್ತು ಪ್ರವರ್ಗ-2ಎ, 2ಬಿ, 3ಎ, 3ಬಿ ಸೇರಿದಂತೆ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಪ್ರವರ್ಗ-1, ಎಸ್.ಸಿ ಹಾಗೂ ಎಸ್.ಟಿ ಸಮುದಾಯದ ಪೋಷಕರ ವಾರ್ಷಿಕ ಆದಾಯ ₹2.50 ಲಕ್ಷ ಮೀರಿರಬಾರದು. ಪ್ರವರ್ಗ-2ಎ, 2ಬಿ, 3ಎ, 3ಬಿ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ₹1 ಲಕ್ಷಕ್ಕೆ ಸೀಮಿತವಾಗಿರಬೇಕು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದ್ದು, ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ಅರ್ಜಿ ಸಲ್ಲಿಸಲು ಜೂನ್ 15, 2026 ಕೊನೆಯ ದಿನಾಂಕವಾಗಿದೆ.
ವಿದ್ಯಾರ್ಥಿಗಳು ಶಿಷ್ಯವೇತನ ಮತ್ತು ವಿದ್ಯಾರ್ಥಿನಿಲಯ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿನಿಲಯಗಳ ವಿವರ, ಪ್ರವೇಶಕ್ಕೆ ಅಗತ್ಯ ಅರ್ಹತೆಗಳು, ಸಲ್ಲಿಸಬೇಕಾದ ದಾಖಲೆಗಳು ಹಾಗೂ ಸರ್ಕಾರದ ಆದೇಶಗಳ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವೆಬ್ಸೈಟ್ನಲ್ಲಿ ಮಾಹಿತಿ ಲಭ್ಯವಿದೆ.
ಅರ್ಜಿ ಸಲ್ಲಿಕೆಯಲ್ಲಿ ತಾಂತ್ರಿಕ ತೊಂದರೆಗಳು ಎದುರಾದಲ್ಲಿ bcwdhelpline@karnataka.gov.in ಇ-ಮೇಲ್ ಮೂಲಕ ಅಥವಾ ಜಿಲ್ಲಾ ಹಾಗೂ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 080-8050770004, 080-8050770005 ಹಾಗೂ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08176-295803 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
– ಮಂಜುನಾಥ್ ಐ.ಕೆ
