ಕೊರಟಗೆರೆ:– ತಾಲ್ಲೂಕಿನ ಸರ್ವೆ ಇಲಾಖೆಯಲ್ಲಿ ವಿವಿಧ ಕಾರಣಗಳಿಂದ ಸುಮಾರು 1200ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದು, ಸಾರ್ವಜನಿಕರು ಜಮೀನು ಮಾರಾಟ, ಪರಭಾರೆ, ಹಕ್ಕು ಬದಲಾವಣೆ ಸೇರಿದಂತೆ ಅನೇಕ ಭೂ ಸಂಬಂಧಿತ ಕಾರ್ಯಗಳನ್ನು ಮಾಡಿಸಿಕೊಳ್ಳಲು ಸಂಕಷ್ಟ ಅನುಭವಿಸುತ್ತಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 20 ಸರ್ಕಾರಿ ಭೂಮಾಪಕರ ಹುದ್ದೆಗಳಿದ್ದು, ಪ್ರಸ್ತುತ ಕೇವಲ 18 ಮಂದಿ ಕರ್ತವ್ಯದಲ್ಲಿದ್ದಾರೆ. ಇವರಲ್ಲೂ 7 ಮಂದಿ ಡೆಪ್ಯುಟೇಷನ್ ಮೇಲೆ ಹೊರ ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಾಲ್ಲೂಕಿನಲ್ಲಿ ಕೇವಲ 11 ಮಂದಿ ಮಾತ್ರ ಸೇವೆಗೆ ಲಭ್ಯರಾಗಿದ್ದಾರೆ. ಇದೇ ತಿಂಗಳ 30ರಂದು ಮತ್ತೊಬ್ಬ ಭೂಮಾಪಕ ನಿವೃತ್ತಿಯಾಗಲಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆ ಮತ್ತಷ್ಟು ಗಂಭೀರವಾಗಲಿದೆ.
ಹಾಲಿ ಕಾರ್ಯನಿರ್ವಹಿಸುತ್ತಿರುವ ಭೂಮಾಪಕರಲ್ಲಿ 4 ಮಂದಿ ಪುರುಷರು ಹಾಗೂ 6 ಮಂದಿ ಮಹಿಳಾ ಸಿಬ್ಬಂದಿ ಇದ್ದು, ಕ್ಷೇತ್ರ ಮಟ್ಟದ ಕಾರ್ಯಾಚರಣೆ ಮತ್ತು ಕಡತಗಳ ವಿಲೇವಾರಿಯಲ್ಲಿ ತೊಂದರೆ ಉಂಟಾಗುತ್ತಿದೆ. ಯಾರಾದರೂ ರಜೆ ಪಡೆದರೆ ಕೆಲಸ ಅರ್ಧಕ್ಕೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಇಲಾಖೆಯ ಸಿಬ್ಬಂದಿಯೇ ಅಳಲು ತೋಡಿಕೊಂಡಿದ್ದಾರೆ.
ಸಿಬ್ಬಂದಿ ಕೊರತೆಯಿಂದ ರೈತರು ಮತ್ತು ಸಾರ್ವಜನಿಕರು ತಿಂಗಳುಗಳ ಕಾಲ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹೊಳವನಹಳ್ಳಿ ಹೋಬಳಿಯ ಪಣ್ಣೇನಹಳ್ಳಿ ಗ್ರಾಮದ ಶಿಲ್ಪಶ್ರೀ ಅವರು ಕಳೆದ ಫೆಬ್ರವರಿಯಲ್ಲಿ ಸರ್ವೆ ಮತ್ತು ಅದ್ಬಸ್ತು ಕಾರ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಈವರೆಗೂ ಯಾವುದೇ ಮಾಹಿತಿ ಸಿಗದೆ ಕಚೇರಿಗೆ ಅಲೆದಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೊಂದೆಡೆ ಸಾರ್ವಜನಿಕರ ಅನಗತ್ಯ ಅಲೆದಾಟ ಮತ್ತು ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಲಕ್ಷಾಂತರ ಪುಟಗಳ ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡುವ ಅಗತ್ಯವಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಆಧುನೀಕರಣ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಸರ್ಕಾರ ಹೊಸ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಖಾಲಿ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮ ಕೈಗೊಳ್ಳದಿರುವುದೇ ಸಮಸ್ಯೆ ಹೆಚ್ಚಲು ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಮಂಜುನಾಥ್, “ಕಳೆದ ಎರಡು-ಮೂರು ತಿಂಗಳಿಂದ ಲೈಸೆನ್ಸ್ ಭೂಮಾಪಕರ ಮುಷ್ಕರ ನಡೆಯುತ್ತಿರುವುದು ಹಾಗೂ ಭೂಮಾಪಕರ ಕೊರತೆ ಇರುವುದರಿಂದ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಉಂಟಾಗಿದೆ. ಮುಷ್ಕರ ಅಂತ್ಯಗೊಂಡ ಕೂಡಲೇ ಬಾಕಿ ಇರುವ 1200 ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಸರ್ವೆ ಇಲಾಖೆಗೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಾಲ್ಕು ಗುಂಟೆ ಜಾಗ ಮಂಜೂರಾಗಿದ್ದರೂ, ಪ್ರತ್ಯೇಕ ಕಚೇರಿ ನಿರ್ಮಾಣವಾಗದಿರುವುದು ಇಲಾಖೆಯ ಕಾರ್ಯವೈಖರಿಗೆ ಅಡ್ಡಿಯಾಗುತ್ತಿದೆ. ಪ್ರಸ್ತುತ ರೆಕಾರ್ಡ್ ರೂಂ ಅತ್ಯಂತ ಕಿರಿದಾಗಿದ್ದು, ಸಾರ್ವಜನಿಕರಿಗೆ ಸಮರ್ಪಕವಾಗಿ ಕುಳ್ಳಿರಿಸಿ ಮಾಹಿತಿ ನೀಡಲು ಕೂಡ ಸ್ಥಳಾವಕಾಶ ಇಲ್ಲದ ಪರಿಸ್ಥಿತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬ್ಬಂದಿ ಕೊರತೆ, ಮೂಲಸೌಕರ್ಯ ಅಭಾವ ಮತ್ತು ತಾಂತ್ರಿಕ ಆಧುನೀಕರಣದ ವಿಳಂಬ — ಈ ಮೂರು ಸಮಸ್ಯೆಗಳ ನಡುವೆ ಕೊರಟಗೆರೆ ಸರ್ವೆ ಇಲಾಖೆ ಸಿಲುಕಿಕೊಂಡಿದ್ದು, ಸರ್ಕಾರ ತ್ವರಿತ ಕ್ರಮ ಕೈಗೊಂಡರೆ ಮಾತ್ರ ಸಾರ್ವಜನಿಕರ ಸಂಕಷ್ಟಕ್ಕೆ ಪರಿಹಾರ ಸಿಗಲಿದೆ.
– ಶ್ರೀನಿವಾಸ್, ಕೊರಟಗೆರೆ.
