ಕೊರಟಗೆರೆ :– ಸರ್ಕಾರಿ ಹುದ್ದೆ ಎನ್ನುವುದು ಕೇವಲ ಉದ್ಯೋಗವಲ್ಲ, ಜನಸೇವೆಯ ಜವಾಬ್ದಾರಿಯಾಗಿದೆ. ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕೆಲಸ ಮಾಡಿದಾಗ ಮಾತ್ರ ಅಧಿಕಾರಿಗಳು ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆಯಲು ಸಾಧ್ಯ ಎಂದು ತಹಸೀಲ್ದಾರ್ ಕೆ. ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಯೋನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಸಿ.ಎನ್. ದುರ್ಗ ಹೋಬಳಿಯ ಉಪ ತಹಸೀಲ್ದಾರ್ ಎ.ಜೆ. ರಾಜು ಹಾಗೂ ದ್ವಿತೀಯ ದರ್ಜೆ ಸಹಾಯಕಿ ಶಾಂತಮ್ಮ ಅವರನ್ನು ಗೌರವಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಮತ್ತು ಕರ್ತವ್ಯನಿಷ್ಠೆಯ ಸೇವೆಯೇ ಅಧಿಕಾರಿಯ ನಿಜವಾದ ಸಂಪತ್ತು ಎಂದು ಹೇಳಿದ ಅವರು, ಜನರು ನಮ್ಮ ಕೆಲಸವನ್ನು ಮೆಚ್ಚಿ ಒಳ್ಳೆಯ ಮಾತು ಆಡಿದಾಗ ಮಾತ್ರ ನಮ್ಮ ಸೇವೆಗೆ ಅರ್ಥ ಸಿಗುತ್ತದೆ. ಎ.ಜೆ. ರಾಜು ಹಾಗೂ ಶಾಂತಮ್ಮ ಅವರು ತಮ್ಮ ಕಾರ್ಯನಿಷ್ಠೆಯಿಂದ ಸಹೋದ್ಯೋಗಿಗಳು ಮತ್ತು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಂತಹ ಅಧಿಕಾರಿಗಳು ಇಲಾಖೆಗೆ ಮಾದರಿಯಾಗಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉಪ ತಹಸೀಲ್ದಾರ್ ಎ.ಜೆ. ರಾಜು, ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಮತ್ತು ನಿವೃತ್ತಿ ಸಹಜ ಪ್ರಕ್ರಿಯೆಗಳಾಗಿದ್ದು, ಪ್ರತಿಯೊಬ್ಬ ನೌಕರನು ಮೇಲಾಧಿಕಾರಿಗಳ ನಿರ್ದೇಶನದಂತೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು. ಸಿ.ಎನ್. ದುರ್ಗ ಹೋಬಳಿಯ ಸಾಧನೆಗೆ ಅಲ್ಲಿನ ಸಿಬ್ಬಂದಿಯ ಸಹಕಾರ ಮತ್ತು ಶ್ರಮವೇ ಕಾರಣವಾಗಿದ್ದು, ತಂಡದ ಕೆಲಸದಿಂದಲೇ ಉತ್ತಮ ಫಲಿತಾಂಶ ಸಾಧ್ಯವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ನಿವೃತ್ತರಾದ ಇಬ್ಬರು ನೌಕರರನ್ನು ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವೆಂಕಟೇಶ್ಮೂರ್ತಿ, ವಸಂತಣ್ಣ, ಸಿ.ಡಿ. ಪ್ರಭಾಕರ್, ಶಿರಸ್ತೇದಾರ್ ವೆಂಕಟೇಶ್, ವೆಂಕಟರಂಗನ್, ಮಂಜುನಾಥ್, ಆರ್.ಐ. ಬಸವರಾಜು, ಸಲ್ಮಾನ್, ಪವನ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.ಕ
– ಶ್ರೀನಿವಾಸ್ ಕೊರಟಗೆರೆ.
