ಕೊರಟಗೆರೆ :– ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹವನ್ನು ಬಿಟ್ಟು ಗುಣಮಟ್ಟದ ಶಿಕ್ಷಣ, ಉತ್ತಮ ಸೌಲಭ್ಯಗಳು ಹಾಗೂ ಉಚಿತ ಸೌಲಭ್ಯಗಳನ್ನು ಒದಗಿಸುತ್ತಿರುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸುವ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಕೊರಟಗೆರೆ ಪುರಸಭೆ ಮುಖ್ಯಾಧಿಕಾರಿ ಉಮೇಶ್ ಕರೆ ನೀಡಿದರು.
ಪಟ್ಟಣದ ಗಿರಿನಗರದಲ್ಲಿರುವ ಪಿ.ಎಂ.ಶ್ರೀ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಅಂಗವಾಗಿ ಆಯೋಜಿಸಿದ್ದ ಕಲಿಕಾ ಚೇತರಿಕೆ ವರ್ಷ ಹಾಗೂ ದಾಖಲಾತಿ ಆಂದೋಲನ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯಾದ್ಯಂತ ಶಾಲೆಗಳು ಪುನರಾರಂಭಗೊಂಡಿರುವ ಹಿನ್ನೆಲೆಯಲ್ಲಿ ದಾಖಲಾತಿ ಹೆಚ್ಚಳಕ್ಕೆ ಶಿಕ್ಷಕರು ವಿಶೇಷ ಒತ್ತು ನೀಡಬೇಕು. ಮಕ್ಕಳ ಹಾಜರಾತಿ ಮತ್ತು ದಾಖಲಾತಿಯಷ್ಟೇ ಮುಖ್ಯವಲ್ಲ, ಅವರ ಕಲಿಕಾ ಗುಣಮಟ್ಟವೂ ಉತ್ತಮವಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳತ್ತ ಪೋಷಕರ ಒಲವು ಹೆಚ್ಚುತ್ತಿರುವುದು ಸರ್ಕಾರಿ ಶಾಲೆಗಳ ದಾಖಲಾತಿ ಕುಸಿತಕ್ಕೆ ಕಾರಣವಾಗಿದ್ದು, ಇದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬಡವರು ಹಾಗೂ ರೈತ ಕುಟುಂಬಗಳ ಮಕ್ಕಳಿಗೆ ಯಾವುದೇ ಆರ್ಥಿಕ ಹೊರೆ ಇಲ್ಲದೆ ಗುಣಮಟ್ಟದ ಶಿಕ್ಷಣ ಪಡೆಯಲು ಸರ್ಕಾರಿ ಶಾಲೆಗಳು ಅತ್ಯುತ್ತಮ ವೇದಿಕೆಯಾಗಿವೆ. ಸರ್ಕಾರಿ ಶಾಲೆಗಳ ಶಿಕ್ಷಕರು ತರಬೇತಿ ಪಡೆದ ಪರಿಣತ ಶಿಕ್ಷಕರಾಗಿದ್ದು, ಶಾಲೆಗಳಲ್ಲಿರುವ ಸೌಲಭ್ಯಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಶಿವಶಂಕರಯ್ಯ ಮಾತನಾಡಿ, ಗಿರಿನಗರದ ಪಿ.ಎಂ.ಶ್ರೀ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಕೆಜಿ ರಿಂದ 5ನೇ ತರಗತಿವರೆಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ ಬಿಸಿಯೂಟ, ಹಾಲು, ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸಲಾಗುತ್ತದೆ. ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ದ್ವಿಭಾಷಾ ಬೋಧನೆ, ಉಚಿತ ಪಠ್ಯಪುಸ್ತಕಗಳು, ಎರಡು ಜೋಡಿ ಸಮವಸ್ತ್ರ, ಶೂ-ಸಾಕ್ಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜೊತೆಗೆ ಸ್ಪೋಕನ್ ಇಂಗ್ಲಿಷ್, ಚಿತ್ರಕಲೆ, ಸಂಗೀತ, ಯೋಗ, ಕರಾಟೆ ಹಾಗೂ ಅನುಭವಾತ್ಮಕ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ದಾಖಲಾತಿ ಆಂದೋಲನ ಜಾಥಾದಲ್ಲಿ ಶಾಲಾ ಮಕ್ಕಳು, ಸಹ ಶಿಕ್ಷಕರಾದ ರಾಮಕೃಷ್ಣಪ್ಪ, ವಿಜಯಲಕ್ಷ್ಮಮ್ಮ, ಬಿ.ಎನ್. ಲೀಲಾ, ಅತಿಥಿ ಶಿಕ್ಷಕಿ ಗೀತಾಂಜಲಿ, ಅಡುಗೆ ಸಿಬ್ಬಂದಿ ಹಾಗೂ ಪೋಷಕರು ಭಾಗವಹಿಸಿ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳಕ್ಕೆ ಬೆಂಬಲ ವ್ಯಕ್ತಪಡಿಸಿದರು.
