ಬ್ರಿಕ್ಸ್ (BRICS) ರಾಷ್ಟ್ರಗಳ ವಿಪತ್ತು ಅಪಾಯ ತಗ್ಗಿಸುವಿಕೆ (Disaster Risk Reduction-DRR) ಕಾರ್ಯಪಡೆಯ ಎರಡನೇ ತಾಂತ್ರಿಕ ಸಭೆಯು ಜೂನ್ 3ರಿಂದ 5ರವರೆಗೆ ಒಡಿಶಾದ ಪುರಿಯಲ್ಲಿ ನಡೆಯಲಿದ್ದು, ಜಾಗತಿಕ ಮಟ್ಟದಲ್ಲಿ ವಿಪತ್ತು ನಿರ್ವಹಣೆ ಮತ್ತು ಹವಾಮಾನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಮಹತ್ವದ ವೇದಿಕೆಯಾಗಲಿದೆ.
ಭಾರತವು 2026ರ ಬ್ರಿಕ್ಸ್ ಅಧ್ಯಕ್ಷ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ ಈ ಸಭೆಯನ್ನು ಆಯೋಜಿಸಲಾಗುತ್ತಿದೆ. ಪುರಿಯ ತಾಜ್ ಪುರಿ ರಿಸಾರ್ಟ್ನಲ್ಲಿ ನಡೆಯಲಿರುವ ಸಭೆಯಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ಸೇರಿದಂತೆ ಸೌದಿ ಅರೇಬಿಯಾ, ಈಜಿಪ್ಟ್, ಯುನೈಟೆಡ್ ಅರಬ್ ಎಮಿರೇಟ್ಸ್, ಇಥಿಯೋಪಿಯಾ, ಇರಾನ್ ಮತ್ತು ಇಂಡೋನೇಷ್ಯಾ ಸೇರಿದಂತೆ ಒಟ್ಟು 11 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ವಿಪತ್ತು ಅಪಾಯ ತಗ್ಗಿಸುವಿಕೆಗೆ ಅಗತ್ಯವಾದ ಹಣಕಾಸು ವ್ಯವಸ್ಥೆ, ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಬಲ್ಲ ಸ್ಥಿರ ಮೂಲಸೌಕರ್ಯಗಳ ನಿರ್ಮಾಣ, ಮುನ್ನೆಚ್ಚರಿಕಾ ಪ್ರತಿಕ್ರಿಯೆ ಕ್ರಮಗಳು ಹಾಗೂ ಸಾಂಪ್ರದಾಯಿಕ ಜ್ಞಾನದ ಬಳಕೆಯ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ.
ಚಂಡಮಾರುತ ನಿರ್ವಹಣೆ, ಮುನ್ನೆಚ್ಚರಿಕೆ ವ್ಯವಸ್ಥೆ ಹಾಗೂ ವಿಪತ್ತು ಸನ್ನದ್ಧತೆಯಲ್ಲಿ ಒಡಿಶಾ ರಾಜ್ಯವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಾರಣ ಪುರಿಯನ್ನು ಸಭೆಯ ಸ್ಥಳವಾಗಿ ಆಯ್ಕೆ ಮಾಡಲಾಗಿದೆ. ವಿಶೇಷವಾಗಿ 1999ರ ಒಡಿಶಾ ಸೂಪರ್ ಸೈಕ್ಲೋನ್ ನಂತರ ರಾಜ್ಯವು ರೂಪಿಸಿಕೊಂಡಿರುವ ಪರಿಣಾಮಕಾರಿ ವಿಪತ್ತು ನಿರ್ವಹಣಾ ಮಾದರಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ.
ಸಭೆಯ ಭದ್ರತೆಗಾಗಿ ಮೂರು ಹಂತದ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಜೂನ್ 4ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಭಾಗವಹಿಸಲಿದ್ದಾರೆ.
ಈ ಸಭೆಯು ಬ್ರಿಕ್ಸ್ ರಾಷ್ಟ್ರಗಳ ನಡುವೆ ವಿಪತ್ತು ನಿರ್ವಹಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಒಡಿಶಾವನ್ನು ಅಂತರರಾಷ್ಟ್ರೀಯ ಸಮಾವೇಶಗಳ ಪ್ರಮುಖ ತಾಣವಾಗಿ ಗುರುತಿಸುವಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.
