ಬೀದರ್: ರಾಜ್ಯ ಸರ್ಕಾರವು ಸ್ವತಂತ್ರ ಹಸ್ತಪ್ರತಿ ಸಂಗ್ರಹಾಲಯ ಇಲಾಖೆಯನ್ನು ಸ್ಥಾಪಿಸಬೇಕು ಎಂದು ಹಿರಿಯ ಸಾಹಿತಿ, ವಿದ್ವಾಂಸ ಹಾಗೂ ಹಸ್ತಪ್ರತಿ ತಜ್ಞ ಡಾ. ನಾ. ಗೀತಾಚಾರ್ಯ ಒತ್ತಾಯಿಸಿದ್ದಾರೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ನೇತೃತ್ವದಲ್ಲಿ ಬೀದರ್ನ ಕರ್ನಾಟಕ ಪದವಿ ಕಾಲೇಜಿನಲ್ಲಿ ಡಾ. ನಾ. ಗೀತಾಚಾರ್ಯ ಅವರ ಸರ್ವಾಧ್ಯಕ್ಷತೆಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 23ನೇ ಹಸ್ತಪ್ರತಿ ಸಮ್ಮೇಳನ ಸಮಾರೋಪಗೊಂಡಿತು. ಸಮಾರೋಪ ಸಮಾರಂಭದಲ್ಲಿ ಸ್ವತಂತ್ರ ಹಸ್ತಪ್ರತಿ ಸಂಗ್ರಹಾಲಯ ಇಲಾಖೆಯ ಸ್ಥಾಪನೆಗೆ ಸಂಬಂಧಿಸಿದ ನಿರ್ಣಯವನ್ನು ಅಂಗೀಕರಿಸಲಾಯಿತು.
ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗವು ಈ ನಿರ್ಣಯವನ್ನು ಸರ್ಕಾರದ ಗಮನಕ್ಕೆ ತಂದು, ಪ್ರತ್ಯೇಕ ಇಲಾಖೆಯ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಸಲಹೆಗೆ ಸಭೆ ಪ್ರಚಂಡ ಕರತಾಡನದ ಮೂಲಕ ಅನುಮೋದನೆ ನೀಡಿತು.

ಸಮ್ಮೇಳನದ ಗೋಷ್ಠಿಯಲ್ಲಿ ‘ಗೀತಾಚಾರ್ಯ ಅವರ ಕನ್ನಡಪರ ಸಂಘಟನೆ ಮತ್ತು ಹೋರಾಟ’ ವಿಷಯ ಕುರಿತು ಮಾತನಾಡಿದ ಶೇಷಾದ್ರಿಪುರಂ ಕಾಲೇಜಿನ ಕನ್ನಡ ಉಪನ್ಯಾಸಕ ಹಾಗೂ ಚಿಂತಕ ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ), ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ನೆಲ-ಜಲದ ರಕ್ಷಣೆಗಾಗಿ ಹೋರಾಡಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಸಂಘಟಕರು ಹಾಗೂ ಹೋರಾಟಗಾರರನ್ನು ಸಂಘ-ಸಂಸ್ಥೆಗಳು ಮತ್ತು ಸರ್ಕಾರ ಗುರುತಿಸಿ ಪ್ರಶಸ್ತಿ, ಗೌರವ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.
ಬಿ.ಎಂ. ಶ್ರೀ. ಪ್ರತಿಷ್ಠಾನದ ಕಾರ್ಯಕರ್ತರಾಗಿ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಡಾ. ನಾ. ಗೀತಾಚಾರ್ಯ ಅವರು ಹಸ್ತಪ್ರತಿ ಶಾಸ್ತ್ರ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ರಚಿಸಿರುವ ‘ಹಸ್ತಪ್ರತಿಶಾಸ್ತ್ರ ವಿವೇಚನೆ’, ‘ಹಸ್ತಪ್ರತಿ ಅಧ್ಯಯನ ಶಾಸ್ತ್ರ’ ಮತ್ತು ‘ಕನ್ನಡ ಶಾಸ್ತ್ರೀಯ ಅಧ್ಯಯನ’ ಕೃತಿಗಳು ಈ ಕ್ಷೇತ್ರದ ಪ್ರಮುಖ ಆಕರ ಗ್ರಂಥಗಳಾಗಿವೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಮಾತನಾಡಿದ ಡಾ. ನಾ. ಗೀತಾಚಾರ್ಯ ಅವರು, ರಾಜ್ಯೋತ್ಸವದ ಹೊಸ್ತಿಲಲ್ಲಿರುವ ಕನ್ನಡಿಗರೆಲ್ಲರೂ ಮಾತೃಭಾಷೆಯಲ್ಲಿ ಸಹಿ ಮಾಡುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ. ವೀರೇಶ್ ಬಡಿಗೇರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕರಾಶಿ ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಮಹಾನಂದ ಮಡಕಿ ಅವರು ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಗಾಯಕ ರಾಜಶೇಖರ್ ಅವರ ಗಾಯನ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಶಿಕ್ಷಣ ಪದವಿ ಕಾಲೇಜಿನ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆದ 23ನೇ ರಾಜ್ಯಮಟ್ಟದ ಹಸ್ತಪ್ರತಿ ಸಮ್ಮೇಳನ ಯಶಸ್ವಿಯಾಗಿ ಸಂಪನ್ನಗೊಂಡಿತು.
