ಬ್ರಿಕ್ಸ್ (BRICS) ರಾಷ್ಟ್ರಗಳ ಎರಡನೇ ಸಂಸ್ಕೃತಿ ಕಾರ್ಯಪಡೆ (Culture Working Group – CWG) ಸಭೆಯು ಜೂನ್ 4 ಮತ್ತು 5ರಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆಯಲಿದ್ದು, ಸಂಸ್ಕೃತಿ, ಸೃಜನಾತ್ಮಕ ಆರ್ಥಿಕತೆ, ಕೃತಕ ಬುದ್ಧಿಮತ್ತೆ ಹಾಗೂ ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ ಕುರಿತ ಮಹತ್ವದ ಚರ್ಚೆಗಳು ನಡೆಯಲಿವೆ.
2026ರ ಬ್ರಿಕ್ಸ್ ಅಧ್ಯಕ್ಷ ರಾಷ್ಟ್ರವಾಗಿರುವ ಭಾರತವು “ಸ್ಥೈರ್ಯ, ನವೋದ್ಯಮ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ” (Building for Resilience, Innovation, Cooperation and Sustainability) ಎಂಬ ಧ್ಯೇಯದಡಿ ಈ ಸಭೆಯನ್ನು ಆಯೋಜಿಸಿದೆ.
ಪ್ರಸ್ತುತ ಬ್ರಿಕ್ಸ್ ಒಕ್ಕೂಟದಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಇಂಡೋನೇಷ್ಯಾ ಸೇರಿದಂತೆ ಒಟ್ಟು 11 ರಾಷ್ಟ್ರಗಳು ಸದಸ್ಯತ್ವ ಹೊಂದಿವೆ.
ಸಭೆಯಲ್ಲಿ ಮೂರು ಪ್ರಮುಖ ಆದ್ಯತಾ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಸೃಜನಾತ್ಮಕ ಆರ್ಥಿಕತೆ, ಸಾಂಸ್ಕೃತಿಕ ಉದ್ಯಮಗಳು ಹಾಗೂ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಹಕ್ಕುಸ್ವಾಮ್ಯ (Copyright); ಸಾಂಸ್ಕೃತಿಕ ಪರಂಪರೆಗಳ ರಕ್ಷಣೆ ಮತ್ತು ಸಾಂಸ್ಕೃತಿಕ ಆಸ್ತಿಗಳ ಮರುಪಡೆಯುವಿಕೆ; ಹಾಗೂ ಸಂಸ್ಕೃತಿ, ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿ ಪ್ರಮುಖ ವಿಷಯಗಳಾಗಿವೆ.
ಇದರೊಂದಿಗೆ ಐದು ವಿಷಯಾಧಾರಿತ ಪ್ಯಾನಲ್ ಚರ್ಚೆಗಳು ನಡೆಯಲಿದ್ದು, ಸೃಜನಾತ್ಮಕ ಆರ್ಥಿಕತೆ ಮತ್ತು ಜನರಿಂದ ಜನರಿಗೆ ಸಹಕಾರ, ಸೃಜನಾತ್ಮಕ ಕ್ಷೇತ್ರದಲ್ಲಿ ನೈತಿಕ ಕೃತಕ ಬುದ್ಧಿಮತ್ತೆಯ ಬಳಕೆ, ಹಂಚಿಕೆಯ ಸಾಂಸ್ಕೃತಿಕ ಪರಂಪರೆಗಳ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಯಲ್ಲಿ ಸಂಸ್ಕೃತಿಯ ಪಾತ್ರದ ಕುರಿತು ತಜ್ಞರು ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.
ಈ ಸಭೆಯ ಚರ್ಚೆಗಳು ಅಂತಿಮವಾಗಿ ಒಂದು ‘ಔಟ್ಕಮ್ ಡಾಕ್ಯುಮೆಂಟ್’ ರೂಪಿಸಲು ನೆರವಾಗಲಿದ್ದು, ಅದನ್ನು ಮುಂದಿನ ಹಂತದಲ್ಲಿ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆಯಲಿರುವ ಬ್ರಿಕ್ಸ್ ಸಂಸ್ಕೃತಿ ಸಚಿವರ ಸಭೆಯಲ್ಲಿ ಪರಿಗಣಿಸಲಾಗುತ್ತದೆ.
ಈ ವರ್ಷದ ಏಪ್ರಿಲ್ 29 ಮತ್ತು 30ರಂದು ಮೊದಲ ಸಂಸ್ಕೃತಿ ಕಾರ್ಯಪಡೆ ಸಭೆ ವರ್ಚುವಲ್ ಮಾದರಿಯಲ್ಲಿ ನಡೆದಿತ್ತು. ಮೂರನೇ ಕಾರ್ಯಪಡೆ ಸಭೆ, ಬ್ರಿಕ್ಸ್ ಸಾಂಸ್ಕೃತಿಕ ಉತ್ಸವ ಹಾಗೂ ಸಂಸ್ಕೃತಿ ಸಚಿವರ ಸಭೆ ಆಗಸ್ಟ್ 2026ರಲ್ಲಿ ಭೋಪಾಲ್ನಲ್ಲಿ ಆಯೋಜನೆಯಾಗಲಿದೆ.
ವಿಶ್ವದ ಅತ್ಯಂತ ಪುರಾತನ ನಿರಂತರ ಜನವಸತಿ ನಗರಗಳಲ್ಲಿ ಒಂದಾದ ವಾರಾಣಸಿ ತನ್ನ ಘಾಟ್ಗಳು, ಗಂಗಾ ಆರತಿ, ಧಾರ್ಮಿಕ ಪರಂಪರೆ ಹಾಗೂ ಸಾಂಸ್ಕೃತಿಕ ವೈಭವಕ್ಕಾಗಿ ಪ್ರಸಿದ್ಧವಾಗಿದೆ. ಸಮೀಪದ ಸಾರನಾಥ್ ಬೌದ್ಧ ಧರ್ಮದ ಪ್ರಮುಖ ಪವಿತ್ರ ಕ್ಷೇತ್ರವಾಗಿದ್ದು, ಗೌತಮ ಬುದ್ಧರು ತಮ್ಮ ಮೊದಲ ಧರ್ಮೋಪದೇಶ ನೀಡಿದ ಸ್ಥಳವೆಂದು ಪರಿಗಣಿಸಲಾಗಿದೆ.
ಈ ಸಭೆಯು ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಸಹಕಾರವನ್ನು ಬಲಪಡಿಸುವುದರ ಜೊತೆಗೆ, ಸಂಸ್ಕೃತಿ ಮತ್ತು ನವೋದ್ಯಮದ ಕ್ಷೇತ್ರದಲ್ಲಿ ಹೊಸ ಸಹಭಾಗಿತ್ವಗಳಿಗೆ ವೇದಿಕೆಯಾಗುವ ನಿರೀಕ್ಷೆಯಿದೆ.
