ಕೊರಟಗೆರೆ:– ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಮದ ಪ್ರಸಿದ್ಧ ಜಿನ ಮಂದಿರದಲ್ಲಿ ಭಗವಾನ್ 1008 ಧರ್ಮನಾಥ ಸ್ವಾಮಿ ಮತ್ತು ಬ್ರಹ್ಮಯಕ್ಷರ 13ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ಅತ್ಯಂತ ಸಡಗರ-ಸಂಭ್ರಮ ಹಾಗೂ ಧಾರ್ಮಿಕ ಶ್ರದ್ಧಾಭಕ್ತಿಗಳೊಂದಿಗೆ ಯಶಸ್ವಿಯಾಗಿ ನೆರವೇರಿತು.
ಶ್ರೀ ಕ್ಷೇತ್ರ ಕಂಬದಹಳ್ಳಿಯ ಜೈನ ಮಠದ ಪೀಠಾಧೀಶರಾದ ಸ್ವಸ್ಥಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಈ ಬಾರಿಯ ಎಲ್ಲ ಧಾರ್ಮಿಕ ವಿಧಿವಿಧಾನಗಳು ಶಾಸ್ರ್ತೋಕ್ತವಾಗಿ ಜರುಗಿದವು.

ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪರಮ ಪೂಜ್ಯ ಸ್ವಸ್ಥಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳನ್ನು ಭಕ್ತಾದಿಗಳು ಪೂರ್ಣಕುಂಭ ಸ್ವಾಗತದೊಂದಿಗೆ ಮಂದಿರಕ್ಕೆ ಬರಮಾಡಿಕೊಂಡರು. ತದನಂತರ ಮಂದಿರದಲ್ಲಿ ನೆರೆದಿದ್ದ ನೂರಾರು ಶ್ರಾವಕ-ಶ್ರಾವಕಿಯರನ್ನು ಉದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು.
”ಜಿನ ಮಂದಿರಗಳು ಕೇವಲ ಕಲ್ಲಿನ ಕಟಡಗಳಲ್ಲ, ಅವು ಧರ್ಮ, ಶಾಂತಿ ಮತ್ತು ಅಹಿಂಸೆಯ ಸಂದೇಶ ಸಾರುವ ಪವಿತ್ರ ಕೇಂದ್ರಗಳು. ಭಗವಾನ್ ಧರ್ಮನಾಥ ಸ್ವಾಮಿ ಹಾಗೂ ಬ್ರಹ್ಮ ಯಕ್ಷರ ಆರಾಧನೆಯಿಂದ ಗ್ರಾಮದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ,” ಎಂದು ಶ್ರೀಗಳು ತಮ್ಮ ದಿವ್ಯ ಸಂದೇಶದಲ್ಲಿ ಆಶೀರ್ವದಿಸಿದರು.

ಕಾರ್ಯಕ್ರಮದ ಧಾರ್ಮಿಕ ಉಪನ್ಯಾಸಕರಾಗಿ ಭಾಗವಹಿಸಿದ್ದ ಗೌರಿಬಿದನೂರು ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಡಾ ಶೈಲಜಾ ಸಪ್ತಗಿರಿ ರವರು ಮಾತನಾಡಿ ಜಗತ್ತಿನಲ್ಲಿ ಅಹಿಂಸಾ ಪದ್ದತಿಗೆ ಬುನಾದಿ ಜೈನಧರ್ಮ ಎಂದು ಹೇಳ ಬಹುದು ಜೈನಧರ್ಮ ಬೋಧಿಸಿದ 24 ತೀರ್ತಂಕರರಾದ ಅದಿನಾಥ,ವೃಷಭನಾಥ ಮುಂತಾದವರು ಸಹಾ ಈ ಅಹಿಂಸಾ ಸಿದ್ಧಾಂತವನ್ನೇ ಬೋಧಿಸಿದರು.ಬುದ್ಧ, ಮಹಾವೀರ, ಸಮಕಾಲೀನರಾದರು ಅವರಿಬ್ಬರು ಬೇಟಿಯದಾ ಪ್ರಸಂಗ ಇತಿಹಾಸ ದಲ್ಲಿ ಕಾಣಲಿಲ್ಲ.ಸತ್ಯ,ದಯೆ,ಅಹಿಂಸೆ ಮುಂತಾದ ಪಂಚಶೀಲ ಸಿದ್ದಾಂತಗಳನ್ನು ಜೈನ ಧರ್ಮದಲ್ಲಿ ನಾವು ಕಾಣಬಹುದು ಎಂದರು.10 ನೇ ಶತಮಾನದಲ್ಲಿ ಪಂಪ,ರನ್ನ, ಪೊನ್ನ ಮುಂತಾದ ಜೈನ ಕವಿಗಳಿಂದ ಕನ್ನಡ ಸಾಹಿತ್ಯ ಲೋಕ ಸಂಪದ್ಭರಿತವಾಗಿ ಸುವರ್ಣಯುಗ ಎಂದು ಕರಿಯಲ್ಪಟ್ಟಿತು ಎಂದರು.

13ನೇ ವರ್ಷದ ಪೂಜಾ ಮಹೋತ್ಸವದ ಅಂಗವಾಗಿ ಮಂದಿರದಲ್ಲಿ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು:
ಭಗವಾನ್ ಧರ್ಮನಾಥ ಸ್ವಾಮಿಯ ಭವ್ಯ ಮೂರ್ತಿಗೆ ಮತ್ತು ಬ್ರಹ್ಮಯಕ್ಷರಿಗೆ 108 ಕಲಶಗಳ ಪವಿತ್ರ ಜಲ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕಗಳನ್ನು ನೆರವೇರಿಸಲಾಯಿತು.
ಜಗತ್ತಿನ ಕಲ್ಯಾಣಕ್ಕಾಗಿ ಮತ್ತು ಗ್ರಾಮದ ಸುಭಿಕ್ಷೆಗಾಗಿ ವಿಶೇಷ ಶಾಂತಿ ಹವನ ಹಾಗೂ ಮಂತ್ರಘೋಷಗಳನ್ನು ಹಮ್ಮಿಕೊಳ್ಳಲಾಗಿತ್ತು.

ಅರಸಾಪುರ ಗ್ರಾಮದ ಸುತ್ತಮುತ್ತಲಿನ ನೂರಾರು ಜೈನ ಬಾಂಧವರು ಹಾಗೂ ಇತರ ಸಾರ್ವಜನಿಕರು ಈ ಪೂಜಾ ಮಹೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತೀರ್ಥಂಕರರ ದರ್ಶನ ಪಡೆದರು. ಕಾರ್ಯಕ್ರಮದ ಕೊನೆಯಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಜಿನ ಮಂದಿರದ ಸಮಿತಿಯ ವತಿಯಿಂದ ಭವ್ಯ ಮಹಾಪ್ರಸಾದ (ಅನ್ನದಾನ) ವ್ಯವಸ್ಥೆ ಮಾಡಲಾಗಿತ್ತು.
ಗ್ರಾಮದ ಪ್ರಮುಖರು, ಜಿನ ಮಂದಿರ ಟ್ರಸ್ಟ್ನ ಪದಾಧಿಕಾರಿಗಳು ಹಾಗೂ ಶ್ರಾವಕ ಸಂಘದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಮಹೋತ್ಸವವು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಮಂಗಲಮಯವಾಗಿ ಮುಕ್ತಾಯಗೊಂಡಿತು.
– ಶ್ರೀನಿವಾಸ್ ಕೊರಟಗೆರೆ.
