ಕೆ.ಆರ್.ಪೇಟೆ: 4 ವರ್ಷಗಳ ಹಿಂದೆ ಸುರಿದ ಕುಂಭದ್ರೋಣ ಮಳೆಯಿಂದಾಗಿ ತಾಲ್ಲೂಕಿನ ಮಾದಿಹಳ್ಳಿ ಹಳ್ಳದ ಸೇತುವೆಯು ಕೊಚ್ಚಿ ಹೋಗಿ ಸಂಚಾರ ವ್ಯವಸ್ಥೆ ಬಂದ್ ಆಗಿತ್ತು. ಈ ಸೇತುವೆಯ ಪುನರ್ ನಿರ್ಮಾಣಕ್ಕೆ ಸುಮಾರು 2.75ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗೆ ಶಾಸಕ ಹೆಚ್.ಟಿ.ಮಂಜು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು ಮಾದಿಹಳ್ಳಿ ಹಳ್ಳದ ಸೇತುವೆಯು ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸಂಪರ್ಕ ರಸ್ತೆಯಾಗಿದೆ. ಸದರಿ ಸೇತುವೆಯನ್ನು ಪುನರ್ ನಿರ್ಮಾಣ ಕಾಮಗಾರಿಗೆ ಅನುಧಾನ ನೀಡುವಂತೆ ವಿಧಾನಸಭೆಯ ಕಲಾಪದಲ್ಲಿ ಮಾತನಾಡಿ ಸರ್ಕಾರದ ಗಮನವನ್ನು ಸೆಳೆದಿದ್ದೆನು. ಪರಿಣಾಮವಾಗಿ ರಾಜ್ಯ ಸರ್ಕಾರವು ಸುಮಾರು 2.75ಕೋಟಿ ರೂಪಾಯಿಗಳನ್ನು ಸದರಿ ಸೇತುವೆಯ ಪುನರ್ ನಿರ್ಮಾಣ ಕಾಮಗಾರಿಗೆ ಅನುಧಾನ ಬಿಡುಗಡೆ ಮಾಡಿದೆ.

ಈ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯು ಕಾವೇರಿ ನೀರಾವರಿ ನಿಗಮದ ಮೂಲಕ ನಡೆದಿದ್ದು ಇಂದು ಭೂಮಿ ಪೂಜೆ ನೆರವೇರಿಸಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಿಕೊಡುವ ಪ್ರಮುಖ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿರುವ ಕಾರಣ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಈ ಭಾಗದ ಸಾರ್ವಜನಿಕರು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ಮಾಡಿ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳುವಂತೆ ಶಾಸಕ ಹೆಚ್.ಟಿ.ಮಂಜು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಹೇಮಾವತಿ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಜಯರಾಂ, ಎಇಇ ರಾಕೇಶ್, ಕಿಕ್ಕೇರಿ ಹೋಬಳಿ ಜೆಡಿಎಸ್ ಅಧ್ಯಕ್ಷ ಕಾಯಿ ಮಂಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಐನೋಹಳ್ಳಿ ಮಲ್ಲೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೃಷ್ಣೇಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶೇಖರ್, ಮುಖಂಡರಾದ ಕಳ್ಳನಕೆರೆ ಲಿಂಗರಾಜೇಗೌಡ, ಪ್ರಥಮ ದರ್ಜೆ ಗುತ್ತಿಗೆದಾರ ಜೆಸಿಬಿ ನಾಗೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
