ಕೆ.ಆರ್.ಪೇಟೆ: 2026-27 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು ತಾಲೂಕಿನಾದ್ಯಂತ ಶಿಕ್ಷಕ ಸಮುದಾಯ ಶಾಲೆಗೆ ತಳಿರು-ತೋರಣ ಕಟ್ಟಿ ಹಬ್ಬದಂತಹ ವಾತಾವರಣ ಸೃಷ್ಠಿಸಿ ಸಡಗರ ಸಂಭ್ರಮದಿಂದ ವಿದ್ಯಾರ್ಥಿಗಳನ್ನು ತಮ್ಮ ತಮ್ಮ ಶಾಲೆಗಳಿಗೆ ಸ್ವಾಗತಿಸಿದರು.
ಸರ್ಕಾರಿ ಶಾಲೆಗಳು, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಸೇರಿದಂತೆ ತಾಲೂಕಿನಲ್ಲಿ ಒಟ್ಟು 376 ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಪ್ರೌಢಶಾಲೆಗಳಿದ್ದು ಎಲ್ಲಾ ಶಾಲೆಗಳು ಜೂ.1ರಂದು ಸೋಮವಾರ ನಿಗಧಿತ ಸಮಯಕ್ಕೆ ಸರಿಯಾಗಿ ಆರಂಭಗೊಂಡವು. ಶಾಲಾ ಪ್ರವೇಶ ದ್ವಾರದಲ್ಲಿ ಕಾದು ನಿಂತ ಶಿಕ್ಷಕರು ಮಕ್ಕಳಿಗೆ ಗುಲಾಬಿ ನೀಡಿ ಶಾಲೆಗಳಿಗೆ ಬರಮಾಡಿಕೊಂಡರು.
ಪಟ್ಟಣದ ಕೆ.ಪಿ.ಎಸ್ ಶಾಲೆ ಮತ್ತು ಬೂಕನಕೆರೆ ಕೆ.ಪಿ.ಎಸ್ ಶಾಲೆಗೆ ಆಗಮಿಸಿದ ಶಾಸಕ ಹೆಚ್.ಟಿ.ಮಂಜು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಅವರೊಂದಿಗೆ ಸೇರಿ ಮಕ್ಕಳಿಗೆ ಗುಲಾಬಿ ನೀಡಿ ಸ್ವಾಗತಿಸಿದರಲ್ಲದೆ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಶಾಲಾ ಸಮವಸ್ತ್ರ, ಪಠ್ಯ ಪುಸ್ತಕ ಮತ್ತಿತರ ಶೈಕ್ಷಣಿಕ ಪರಿಕರಗಳನ್ನು ವಿತರಿಸಿದರು.
ಶಾಲಾ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳೆರಡೂ ಖಾಸಗೀಕರಣದ ಹಿಡಿತದಿಂದ ಬಿಡುಗಡೆಯಾಗಬೇಕು. ಸರ್ಕಾರಿ ಶಾಲೆಗಳು ಉಳಿದು ಬೆಳೆಯದಿದ್ದರೆ ಮುಂದಿನ ದಿನಗಳಲ್ಲಿ ಬಡವರು, ರೈತಾಪಿ ಜನ ಮತ್ತು ಮದ್ಯಮ ವರ್ಗದ ಜನರ ಮಕ್ಕಳಿಗೆ ಶಿಕ್ಷಣ ಗಗನ ಕುಸುಮವಾಗಲಿದೆ. ಕ್ಷೇತ್ರದ ಶಾಸಕನಾಗಿ ನಾನು ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಪ್ರಾಮಾಣಿಕ ಕೆಲಸ ಮಾಡುತ್ತೇನೆಂದರು. ಪಟ್ಟಣದ ಕೆ.ಪಿ.ಎಸ್ ಶಾಲೆಯ ಆವರಣದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ 108 ವರ್ಷಗಳು ತುಂಬಿವೆ. ಶತಮಾನದ ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಸರತಿ ಸಾಲಿನಲ್ಲಿ ನಿಲ್ಲುವ ಹಂತಕ್ಕೆ ಸದರಿ ಶಾಲೆ ಬೆಳೆದಿದೆ. ಕೆ.ಪಿ.ಎಸ್ ಶಾಲೆಯಲ್ಲಿ 2500 ಕ್ಕೂ ಅಧಿಕ ಮಕ್ಕಳು ಕಲಿಕೆ ಮಾಡುತ್ತಿರುವುದು ಸ್ವಾಗತಾರ್ಹ. ಇದೇ ಮಾದರಿಯಲ್ಲಿ ತಾಲೂಕಿನ ಎಲ್ಲಾ ಭಾಗಗಳಲ್ಲೂ ಪೋಷಕರು ಮತ್ತು ಶಿಕ್ಷಕರು ಒಡಗೂಡಿ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸಿದರೆ ಶಿಕ್ಷಣ ಕ್ಷೇತ್ರ ಖಾಸಗೀಕರಣದ ಹಾವಳಿಯಿಂದ ತನ್ನಿಂದ ತಾನೇ ಮುಕ್ತಾಯಗೊಳ್ಳಲಿದೆ ಎಂದರು.

ಮಕ್ಕಳನ್ನು ಎತ್ತನಗಾಡಿಯಲ್ಲಿ ಮೆರವಣಿಗೆ: ತಾಲೂಕಿನ ತೆಂಡೇಕೆರೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಜು ನೇತೃತ್ವದಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮಕ್ಕಳನ್ನು ಎತ್ತಿನ ಗಾಡಿಗಳ ಮೂಲಕ ಪುಷ್ಪವೃಷ್ಠಿಯೊಂದಿಗೆ ಮೆರವಣಿಗೆ ಮಾಡಿ ಶಾಲೆಗೆ ಭವ್ಯ ಸ್ವಾಗತ ಕೋರಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳೊಂದಿಗೆ ತಾವೂ ಸಹ ತೆಂಡೇಕೆರೆ ಗ್ರಾಮದಾದ್ಯಂತ ಎತ್ತಿನಗಾಡಿಯಲ್ಲಿ ಮೆರವಣಿಗೆಯಲ್ಲಿ ಸಾಗಿ ಪೋಷಕರತ್ತ ಕೈಮುಗಿದು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ರಾಜು, ಶಿಕ್ಷಕರಾದ ಎಸ್.ಕೆ.ಚಂದ್ರಶೇಖರ್, ಜಿ.ವಿ.ರಾಮಚಂದ್ರ, ಜಿ.ಎಂ.ಮಮತಾ ಹಾಗೂ ನೂರಾರು ಪೋಷಕರು ಶಾಲಾ ಪ್ರಾರಂಭೋತ್ಸವದಲ್ಲಿ ಭಾಗವಹಿಸಿದ್ದರು.
ಬೂಕನಕೆರೆಯಲ್ಲಿ ಗ್ರಾಮಸ್ಥರು ಗ್ರಾಮದ ಗೋಗಾಲಮ್ಮ ದೇವಾಲಯದ ಆವರಣದಿಂದ ಶಾಸಕ ಹೆಚ್.ಟಿ.ಮಂಜು ಮತ್ತು ವಿದ್ಯಾರ್ಥಿಗಳನ್ನು ಎತ್ತಿನ ಗಾಡಿಯಲ್ಲಿ ಕೂರಿಸಿಕೊಂಡು ಮೆರವಣಿಗೆಯ ಮೂಲಕ ಶಾಲಾ ಆವರಣಕ್ಕೆ ಕರೆತಂದರು. ಮಕ್ಕಳಿಂದಲೇ ಟೇಪ್ ಕತ್ತರಿಸುವ ಮೂಲಕ ಶಾಸಕ ಹೆಚ್.ಟಿ.ಮಂಜು ಮಕ್ಕಳನ್ನು ಶಾಲಾ ಆವರಣಕ್ಕೆ ಬರಮಾಡಿಕೊಂಡರು.
ತಾಲೂಕಿನ ಅಗ್ರಹಾರಬಾಚಹಳ್ಳಿ, ಚಿಲ್ಲದಹಳ್ಳಿ, ಶೀಳನೆರೆ, ಮುಂತಾದ ಕಡೆ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಸಮಿತಿಯವರು ಮಕ್ಕಳನ್ನು ಎತ್ತಿನ ಗಾಡಿಯಲ್ಲಿ ಕೂರಿಸಿ ಮೆರವಣಿಗೆಯ ಮೂಲಕ ಶಾಲೆಗಳಿಗೆ ಕರೆತಂದು ಸಂಭ್ರಮಿಸಿದರು.
ಸರ್ಕಾರಿ ಶಾಲೆಗೆ ಬಸ್ ನೀಡಿದ ಗ್ರಾಮಸ್ಥರು:
ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ನಿವೃತ್ತ ಕೆಶಿಫ್ ಎಂಜಿನಿಯರ್ ಶಿವಕುಮಾರ್ ಅವರು ತಮ್ಮ ತಾವು ಓದಿದ ಕತ್ತರಘಟ್ಟ ಗ್ರಾಮದ ಶಾಲೆಗೆ ಸರ್ಕಾರಿ ಉಳಿವಿಗಾಗಿ 1.45 ಕೋಟಿ ರೂ ವ್ಯಹಿಸಿ ತಮ್ಮ ತಂದೆ ತಾಯಿ ಹೆಸರಿನಲ್ಲಿ ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಿಸಿ ಮಕ್ಕಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಇದರ ಪರಿಣಾಮ ಸದರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ 145 ಕ್ಕೇರಿದೆ. ತಮ್ಮೂರಿನ ಶಾಲೆಯನ್ನು ಕಾನ್ವೆಂಟ್ ಮಾದರಿಯಲ್ಲಿ ಅಭಿವೃದ್ದಿಪಡಿಸಿಲು ನಿರ್ಧರಿಸಿರುವ ಕತ್ತರಘಟ್ಟ ಗ್ರಾಮಸ್ಥರು ಕೆ.ಆರ್.ಪೇಟೆ ಪಟ್ಟಣ ಹಾಗೂ ಸುತ್ತಮುತ್ತಲ ಹಳ್ಳಿಗಳಿಂದ ಮಕ್ಕಳನ್ನು ತಮ್ಮೂರಿನ ಶಾಲೆಗೆ ಆಕರ್ಷಿಸಲು ಖಾಸಗಿ ಬಸ್ ಒಂದನ್ನು ಲೀಸ್ ಪಡೆದು ಮಕ್ಕಳಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿ ಗಮನ ಸೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಶಾಲೆಗಾಗಿಯೇ ಸ್ವಂತ ಬಸ್ ಖರೀದಿಸಿ ಕೊಡುವುದಾಗಿ ಗ್ರಾ.ಪಂ ಮಾಜಿ ಸದಸ್ಯ ಪರಮೇಶ್ ನೇತೃತ್ವದಲ್ಲಿ ನಡೆದ ಪೋಷಕರ ಸಭೆಯಲ್ಲಿ ನಿರ್ಧರಿಸಲಾಗಿದೆ.
– ಶ್ರೀನಿವಾಸ್ ಆರ್.
