ಕೆ.ಆರ್.ಪೇಟೆ: ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗೋ ತಮ್ಮ ಆಸೆಯನ್ನು ಪೂರೈಸಿಕೊಂಡಿದ್ದಾರೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರೋದು ಎಷ್ಟು ಸತ್ಯವೋ, ಅವರ ಮಂತ್ರಿ ಮಂಡಲ ನೋಡಿದಾಗ ಅದು ಸಿದ್ದರಾಮಯ್ಯ ಕ್ಯಾಬಿನೆಟ್ ಆಗಿರೋದು ಅಷ್ಟೇ ಸತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಆಸೆಯನ್ನು ಪೂರೈಸಿಕೊಂಡಿದ್ದಾರೆ. ಆದರೆ ಸರ್ಕಾರದ ಮೇಲೆ ಸಿದ್ದರಾಮಯ್ಯ ಹಿಡಿತ ಸಾಧಿಸಲು ಮುಂದಾಗಿದ್ದು, ಅದಕ್ಕೆ ಅವರ ಸಾಕಷ್ಟು ಬೆಂಬಲಿಗರು ಈಗಾಗಲೇ ಕ್ಯಾಬಿನೆಟ್ ಸೇರಿರುವುದೇ ಸಾಕ್ಷಿ. ಈಗಾಗಲೇ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ವರದಿ ಸ್ವೀಕಾರ ಮಾಡಿದ್ದು, ಡಿಕೆಶಿ ಅದನ್ನು ಹೇಗೆ ಅನುಷ್ಟಾನ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕೆಂದು ಅಭಿಪ್ರಾಯಪಟ್ಟರು.
ಮುಂದಿನ ಎರಡು ವರ್ಷಗಳ ಕಾಲ ಡಿಕೆಶಿ ಎಲ್ಲರನ್ನು ಸಂಬಾಳಿಸಿಕೊ0ಡು ಹೋಗುವುದೇ ದೊಡ್ಡ ಸವಾಲಾಗುತ್ತದೆ. ಕಳೆದ ಮೂರು ವರ್ಷಗಳ ಕಾಲ ರಾಜ್ಯ ಸರ್ಕಾರ ಗ್ಯಾರಂಟಿಯಿ0ದ ಯಾವುದೇ ಅಭಿವೃದ್ಧಿ ಕೆಲಸ ಮಾಡೋಕೆ ಆಗಿಲ್ಲ. ಬರೀ ಅಲ್ಪಸಂಖ್ಯಾತ ಓಲೈಕೆ ಮಾಡಿಕೊಂಡು ಸರ್ಕಾರ ನಡೆಸಿದ ಸಿದ್ದರಾಮಯ್ಯ ಅವರ ಹಾದಿಯನ್ನೇ ಡಿಕೆಶಿ ಸಹ ಹಿಡಿಯಲಿದ್ದಾರೆ ಎಂದು ಟೀಕಿಸಿದರು.
ಡಿ.ಕೆ.ಶಿವಕುಮಾರ್ ಮುಂದೆ ದೊಡ್ಡ ಸವಾಲಿದ್ದು, ದೊಡ್ಡ ಸವಾಲುಗಳ ಮುಂದೆ ರಾಜ್ಯದ ಅಭಿವೃದ್ಧಿ ಮಾಡಬೇಕಾದ ಅನಿವಾರ್ಯತೆ ಇದೆ. ಇದರ ಜೊತೆಗೆ ಮಂತ್ರಿಮ0ಡಲವನ್ನು ಸರಿದೂಗಿಸಿಕೊಂಡು ಹೋಗುವ ಸವಾಲು ಕೂಡ ಇದೆ. ಇದೆಲ್ಲವನ್ನು ಡಿಕೆಶಿ ಹೇಗೆ ಸರಿಪಡಿಸಿಕೊಂಡು ಹೋಗುತ್ತಾರೆ ಅನ್ನೋದನ್ನು ನಾವು ನೋಡಬೇಕು. ನಾವು ವಿರೋಧ ಪಕ್ಷವಾಗಿ ಯಾರು ಎಷ್ಟೇ ಪ್ರಬಲರಾಗಿದ್ದರೂ ಆಡಳಿತ ಪಕ್ಷದ ವೈಫಲ್ಯವನ್ನು ಜನರ ಮುಂದೆ ಬಿಚ್ಚಿಡುವ ಕೆಲಸ ಮಾಡ್ತೇವೆ. ಎರಡು ಪಕ್ಷದ ಇಬ್ಬರಿಗೂ ಸವಾಲಿದೆ. ಈ ಸವಾಲನ್ನು ನಾವು ಮೆಟ್ಟಿ ನಿಲ್ಲುವ ಕೆಲಸವನ್ನು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಸರ್ಕಾರ ಇದ್ದಾಗ ಶೇ.40 ಕಮಿಷನ್ ಸರ್ಕಾರ ಇತ್ತು. ಇದೀಗ ಡಿಕೆಶಿ ಸರ್ಕಾರದಲ್ಲೂ ಸಹ ಕಮಿಷನ್ ದಂಧೆ ನಿಲ್ಲುವುದಿಲ್ಲ. ಅವರು ಏನು ಅಂತ ಕಳೆದ ಮೂರು ವರ್ಷದಲ್ಲಿ ಜನ ನೋಡಿದ್ದು, ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದರು.
ತಮ್ಮ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿ, ಕೆಲವರಿಗೆ ನನ್ನ ಹೇಸರೇಳಿಕೊಂಡು ಪ್ರಚಾರ ಪಡೆಯುವ ಹುಚ್ಚು. ಅಂತಹವರ ಬಗ್ಗೆ ನಾನು ಯಾವುದೇ ತರಹದ ಮಾತನಾಡಲು ಹೋಗಲ್ಲ ಎಂದು ಯತ್ನಾಳ್ಗೆ ತಿರುಗೇಟು ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಸಿನಾರಾಯಣಗೌಡ, ಮಾಜಿ ಶಾಸಕ ಪ್ರೀತಮ್ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಅಶೋಕ್ ಜಯರಾಂ,ಕೆ.ಜಿ.ತಮ್ಮಣ್ಣ, ಬಸ್ ಸಂತೋಷ್ ಕುಮಾರ್ ಇತರರು ಇದ್ದರು.
– ಶ್ರೀನಿವಾಸ್ ಆರ್.
