ರಾಮನಾಥಪುರ, ಜೂನ್ 4: ನಮ್ಮ ಭಾರತೀಯ ಸನಾತನ ಧರ್ಮ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ಉಳಿವು ಮತ್ತು ಬೆಳವಣಿಗೆಗೆ ಮಠ-ಮಂದಿರಗಳು ಪ್ರಮುಖ ಪಾತ್ರವಹಿಸುತ್ತಿದ್ದು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ನೈತಿಕ ಮೌಲ್ಯಗಳನ್ನು ಬಲಪಡಿಸುವ ಕೇಂದ್ರಗಳಾಗಿವೆ ಎಂದು ರಾಮನಾಥಪುರದ ಶ್ರೀ ರಾಘವೇಂದ್ರಸ್ವಾಮಿ ಉತ್ತರಾಧಿ ಮಠದ ವ್ಯವಸ್ಥಾಪಕರಾದ ಶ್ರೀ ವಿ. ಕನಕಾಚಾರ್ಯರು ಹೇಳಿದರು.
ಕಾವೇರಿ ನದಿ ದಂಡೆಯಲ್ಲಿರುವ Sri Raghavendra Swamy Uttaradi Mutt ನಲ್ಲಿ ಗುರುವಾರ ಸಂಜೆ ನಡೆದ ಶ್ರೀ ರಾಘವೇಂದ್ರಸ್ವಾಮಿಗಳ ಉತ್ಸವ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಆಧ್ಯಾತ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಏಕೀಕರಿಸುವ ಶಕ್ತಿಯಾಗಿವೆ ಎಂದು ತಿಳಿಸಿದರು.

ಮನುಷ್ಯ ತನ್ನ ಬುದ್ಧಿಶಕ್ತಿಯನ್ನು ಸದ್ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಭಗವಂತನು ಮನುಷ್ಯನಿಗೆ ಉನ್ನತ ಜ್ಞಾನಾರ್ಜನೆಯ ಸಾಮರ್ಥ್ಯ ನೀಡಿದ್ದು, ಅದನ್ನು ಸಾರ್ಥಕಗೊಳಿಸಲು ಉನ್ನತ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಸತ್ಕಾರ್ಯಗಳು ಶಾಶ್ವತವಾಗಿದ್ದು, ದುಷ್ಚಟ ಹಾಗೂ ದುರಭ್ಯಾಸಗಳಿಂದ ದೂರವಿದ್ದು ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿ ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.
ಯಾವುದೇ ವ್ಯಕ್ತಿ ಯಶಸ್ಸು ಸಾಧಿಸಬೇಕಾದರೆ ಅವನ ಮುಂದೆ ಗುರಿ ಮತ್ತು ಹಿಂದೆ ಗುರುವಿರಬೇಕು ಎಂಬ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿದೆ. ಗುರುವಿಲ್ಲದೆ ಜ್ಞಾನಕ್ಕೆ ಹಾಗೂ ಜೀವನಕ್ಕೆ ಅರ್ಥವಿಲ್ಲ. ತಾಯಿಯೇ ಮೊದಲ ಗುರುವಾಗಿದ್ದು ಜೀವನದ ಅರ್ಥವನ್ನು ಕಲಿಸುತ್ತಾಳೆ. ನಂತರ ಗುರು ಜೀವನಕ್ಕೆ ಅಗತ್ಯವಾದ ಜ್ಞಾನವನ್ನು ನೀಡುತ್ತಾನೆ. ಆದ್ದರಿಂದ ಗುರುವಿನ ಮಾರ್ಗದರ್ಶನವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಕನಕಾಚಾರ್ಯರು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಉತ್ಸವ ವಿಶೇಷ ಪೂಜೆ, ಮಹಾಮಂಗಳಾರತಿ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು. ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ನೇತೃತ್ವವನ್ನು ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ವಿ. ಕನಕಾಚಾರ್ಯರು ವಹಿಸಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
