ಕೊರಟಗೆರೆ, ಜೂನ್ 5: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜೆ.ಎಸ್. ಶಾಲೆಯ ವತಿಯಿಂದ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ರ್ಯಾಲಿಯನ್ನು ಆಯೋಜಿಸಲಾಯಿತು.
ಶಾಲೆಯ ಆವರಣದಿಂದ ಆರಂಭವಾದ ರ್ಯಾಲಿಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪರಿಸರ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿತು. ರ್ಯಾಲಿಯಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ಗಿಡ ನೆಡುವ ಮಹತ್ವ, ಸ್ವಚ್ಛತೆ ಕಾಪಾಡುವ ಅಗತ್ಯತೆ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಕುರಿತು ಘೋಷಣೆಗಳನ್ನು ಕೂಗಿ ಗಮನ ಸೆಳೆದರು.

ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಬಳಿಕ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಯುತ ರಿಜ್ವಾನ್ ಅಲಿ (ನ್ಯಾಯಾಧೀಶರು), ಅಶ್ವಥ್ ಡಿ.ವೈ.ಎಫ್., ನಿವೃತ್ತ ಸಿ.ಆರ್.ಪಿ ಶ್ರೀಯುತ ಜನಪ್ಪ ಹಾಗೂ ಜೆ.ಎಸ್. ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶ್ರೀಯುತ ಇಮ್ರಾನ್ ಸಾರ್ ಅವರು ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವದ ಕುರಿತು ತಿಳಿಸಿ, ಪ್ರಕೃತಿ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ, ಜವಾಬ್ದಾರಿ ಮತ್ತು ಜಾಗೃತಿ ಮೂಡಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು. ಪರಿಸರ ಸಂರಕ್ಷಣೆಯ ಸಂಕಲ್ಪದೊಂದಿಗೆ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
