ತುಮಕೂರು: ನಗರದ 32 ಹಾಗೂ 35ನೇ ವಾರ್ಡ್ಗೆ ಸೇರುವ ಸಿದ್ದರಾಮೇಶ್ವರ ಬಡಾವಣೆ ಪೂರ್ವ ಪ್ರದೇಶಕ್ಕೆ ಪಾಲಿಕೆ ಆಯುಕ್ತೆ ಶುಭ ಅವರು ಅಧಿಕಾರಿಗಳು, ಸಿಬ್ಬಂದಿಗಳ ತಂಡದೊಂದಿಗೆ ಭೇಟಿ ನೀಡಿ, ಮೂಲಸೌಕರ್ಯಗಳ ಕೊರತೆಯನ್ನು ಪರಿಶೀಲಿಸಿದರಲ್ಲದೆ ಶಾಂತಿನಿಕೇತನ ಶಾಲೆಯಲ್ಲಿ ನಾಗರಿಕರ ಕುಂದು ಕೊರತೆ ಆಲಿಸಿದರು.ನಾಗರಿಕ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಜಯಪ್ರಕಾಶ್, ನಿವಾಸಿಗಳಾದ ಪ್ರಸನ್ನಕುಮಾರ್ರೆಡ್ಡಿ, ಲಕ್ಷ್ಮಿಕಾಂತ್ ಎಚ್.ಜೆ, ಶಿವಲಿಂಗಯ್ಯ, ರಾಜಶೇಖರ್, ವಿನಯ್, ವಿನಯ್ಕುಮಾರ್, ತುಕಾರಾಂ, ರವಿ, ಚಂದ್ರಯ್ಯ, ಕೃಷ್ಣಕುಮಾರ್, ದೊಂತಿ ಅಮರನಾಥ್ ಮತ್ತಿತರರು ಈ ವೇಳೆ ಹಾಜರಿದ್ದು, ಬಡಾವಣೆಯಲ್ಲಿನ ಸಮಸ್ಯೆಗಳ ಬಗ್ಗೆ ಆಯುಕ್ತರ ಗಮನಸೆಳೆದರು.
ಶಾಂತಿನಿಕೇತನ ಶಾಲೆ ಮುಂಭಾಗದ ಅರ್ಧಕ್ಕೆ ನಿಂತಿರುವ ಚರಂಡಿ ಕಾಮಗಾರಿ ಮುಂದುವರಿಕೆ, ಸದರಿ ಚರಂಡಿ ಯುಜಿಡಿ ನೀರು ಸೇರುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ನಿತ್ಯ ಎದುರಿಸುತ್ತಿರುವ ವಾಸನೆ ಸಮಸ್ಯೆ, ಒಳಭಾಗದ ಫಾರ್ಮಸಿ ಕಾಲೇಜು ಹಿಂಭಾಗದ ರಸ್ತೆಯಲ್ಲಿ ಹೊಸ ಡ್ರೈನ್ ನಿರ್ಮಾಣ, ಯುಜಿಡಿ, ಕುಡಿಯುವ ನೀರಿನ ಪೈಪ್ಲೈನ್ ಮುಂದುವರಿಕೆ ಕಾಮಗಾರಿ, ಬೀದಿ ದೀಪಗಳ ಅಳವಡಿಕೆ, ಹೇಮಾವತಿ ನೀರು ಸರಬರಾಜು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಲಾಯಿತು. ಪೌರಕಾರ್ಮಿಕರ ಕೊರತೆ ಬಗ್ಗೆಯೂ ಮಾಜಿ ಮೇಯರ್ ಹಾಗೂ ಬಡಾವಣೆ ಸಮಿತಿ ಅಧ್ಯಕ್ಷರು ಆಯುಕ್ತರ ಗಮನಸೆಳೆದರು.
ಇದೇ ವೇಳೆ ಸದಾಶಿವಯ್ಯ ಮತ್ತು ಇತರ ನಿವಾಸಿಗಳು ರೈಲ್ವೆ ಮೇಲ್ಸೆತುವೆ ಕಾಮಗಾರಿಯಿಂದಾಗಿ ವಾಹನಗಳನ್ನು ಒಳ ಭಾಗದ ರಸ್ತೆಗೆ ಮಾರ್ಗ ಬದಲಾವಣೆ ಮಾಡಿದ್ದು, ಕಿರಿದಾದ ರಸ್ತೆಯಲ್ಲಿ ವಾಹನಗಳು ಮುಖಾಮುಖಿ ಬಂದಾಗ ಅಪಘಾತ ಉಂಟಾಗುವ ಸನ್ನಿವೇಶ ನಿರ್ಮಾಣವಾಗಿದೆ. ಹಾಗೆಯೇ ರಸ್ತೆಯಲ್ಲಿ ವಾಹನಗಳು ಏಳಿಸುವ ಧೂಳು ಮಣ್ಣು ಮನೆಗಳಿಗೆ ರಾಚುತ್ತಿದ್ದು, ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಹಾಗಾಗಿ ರಸ್ತೆಯಲ್ಲಿ ನಿತ್ಯ ನೀರು ಸಿಂಪಡಣೆ ಜೊತೆಗೆ ಏಕಮಾರ್ಗ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಯುಕ್ತರನ್ನು ಕೋರಿದರು.
ಸಂಚಾರಿ ಮಾರ್ಗದ ಸಮಸ್ಯೆ ಬಗ್ಗೆ ಸಂಚಾರಿ ಪೊಲೀಸರೊಂದಿಗೆ ಮಾತನಾಡಿ ಕ್ರಮ ವಹಿಸುವಂತೆ ಆಯುಕ್ತರು ಸೂಚಿಸಿದರು. ನಾಗರಿಕರ ಪರವಾಗಿ ಆಯುಕ್ತರನ್ನು ಗೌರವಿಸಲಾಯಿತು. ಪಾಲಿಕೆ ಕಾರ್ಯಪಾಲಕ ಅಭಿಯಂತರಾದ ಬಿ.ಜಿ.ವಿನಯ್ ಕುಮಾರ್,ಪರಿಸರ ಅಭಿಯಂತರರಾದ ಶ್ರೀಮತಿ ನಿಖಿತ, ಎಇಇಗಳು, ಆರೋಗ್ಯ ನಿರೀಕ್ಷಕರು ಹಲವರು ಇದ್ದರು.
– ಕೆ.ಬಿ.ಚಂದ್ರಚೂಡ
