ಹಾಸನ, ಜೂನ್ 10: ಹಾಸನ ತಾಲೂಕು ಮಹಿಳಾ ಕದಳಿ ವೇದಿಕೆ, ಭೀಮ ವಿಜಯ ದಿನಪತ್ರಿಕೆ, ಶರಣ ಸಾಹಿತ್ಯ ಪರಿಷತ್ತು ಹಾಗೂ ಉದಯ ವರದಿ ದಿನಪತ್ರಿಕೆಗಳ ಸಂಯುಕ್ತ ಆಶ್ರಯದಲ್ಲಿ ಜೂನ್ 21ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ವಚನ ವಾಚನ, ಕವಿಗೋಷ್ಠಿ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ “ಕೋಮು ಸೌಹಾರ್ದತೆಗೆ ಸವಾಲುಗಳು” ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಉಪನ್ಯಾಸ ನೀಡಲಿದ್ದು, ಮಾಜಿ ಶಾಸಕ ಹಾಗೂ ಚಿಂತಕ ವೈ.ಎಸ್.ವಿ. ದತ್ತ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಖಕ ಹಾಗೂ ಚಿಂತಕ ಸುಬ್ಬು ಹೊಲೆಯಾರ್ ವಹಿಸಲಿದ್ದು, ಉದಯವರದಿ ಸಂಪಾದಕ ವೇಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಶಗೌಡ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆಂಚೇಗೌಡ, ಭೀಮ ವಿಜಯ ಪತ್ರಿಕೆಯ ಸಂಪಾದಕ ಹೆತ್ತೂರು ನಾಗರಾಜು, ಕದಳಿ ಮಹಿಳಾ ವೇದಿಕೆ ತಾಲೂಕು ಅಧ್ಯಕ್ಷೆ ಗಿರಿಜಾ ನಿರ್ವಾಣಿ, ಚಿಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ನಂ. ಲೋಕೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಬಳಿಕ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಗಿರಿಜಾ ನಿರ್ವಾಣಿ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಲೀಲಾವತಿ, ಅತ್ನಿ ಶಾಂತ, ಸುಕನ್ಯ ಮುಕುಂದ, ಪದ್ಮಾವತಿ ವೆಂಕಟೇಶ್, ಕಲಾವತಿ ಮಧುಸೂಧನ್, ವಾಸು ಸಮುದ್ರವಳ್ಳಿ, ಮೆಹೆಬೂಬ್, ಲಕ್ಷ್ಮೀದೇವಿ ದಾಸಪ್ಪ, ತೀರ್ಥಕುಮಾರಿ, ಶ್ವೇತಾ ಮೋಹನ್, ರೇಖಾ ಪ್ರಕಾಶ್, ದಿಬ್ಬೂರು ರಮೇಶ್ ಸೇರಿದಂತೆ ಜಿಲ್ಲೆಯ ಅನೇಕ ಕವಿಗಳು, ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
– ಕುಮಾರಸ್ವಾಮಿ ಎಂ.ಎನ್
