ಹಾಸನ: ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ಆರೋಗ್ಯ ಸೇವೆ ದೊರೆಯುವ ಉದ್ದೇಶದಿಂದ ಶ್ರೀ ಕ್ಷೇತ್ರ ಪುಷ್ಪಗಿರಿ ಮಹಾಸಂಸ್ಥಾನದ ವತಿಯಿಂದ ಆರಂಭಿಸಲಾದ **’ಶ್ರೀ ಕ್ಷೇತ್ರ ಪುಷ್ಪಗಿರಿ ಉಚಿತ ಸಂಚಾರಿ ಆಸ್ಪತ್ರೆ’**ಗೆ ಶುಭ ಚಾಲನೆ ನೀಡಲಾಯಿತು.
ಹಾಸನ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಪುಷ್ಪಗಿರಿಯಲ್ಲಿ ನಡೆದ ಉದ್ಘಾಟನಾ ಸಮಾರಂಭವು ಭಕ್ತರು, ಗಣ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತು. ಚಿಲ್ಕೂರು, ಯಲಗುಂದ ಹಾಗೂ ಗುಂಡಶೆಟ್ಟಿಹಳ್ಳಿ ಒಳಗೊಂಡ ಏಕೀಕೃತ ಶ್ರೀ ಪುಷ್ಪಗಿರಿ ಮಹಾಸಂಸ್ಥಾನದ ಶ್ರೀಮಠದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀಮದ್ ಶ್ರೀಶೈಲ ಪುಷ್ಪಗಿರಿ ಸೂರ್ಯ ಸಿಂಹಾಸನಾಧೀಶ್ವರ 1108 ಜಗದ್ಗುರು ಶ್ರೀ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರು ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯಗಳ ಭಾಗವಾಗಿ ಉಚಿತ ಸಂಚಾರಿ ಆಸ್ಪತ್ರೆ ಯೋಜನೆಗೆ ಚಾಲನೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪೂಜ್ಯ ಜಗದ್ಗುರು ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಂಚಾರಿ ಆಸ್ಪತ್ರೆಗೆ ಅಧಿಕೃತ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಗಣ್ಯರು, ಆರೋಗ್ಯ ಸೇವೆ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು ಸೂಕ್ತ ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಸಂಚಾರಿ ಆಸ್ಪತ್ರೆಯ ಮೂಲಕ ಹಳ್ಳಿಗಳ ಮನೆಬಾಗಿಲಿಗೆ ಆರೋಗ್ಯ ಸೇವೆ ತಲುಪಲಿದ್ದು, ಸಾಮಾನ್ಯ ಆರೋಗ್ಯ ತಪಾಸಣೆ, ಪ್ರಾಥಮಿಕ ಚಿಕಿತ್ಸೆ, ಆರೋಗ್ಯ ಜಾಗೃತಿ ಹಾಗೂ ಅಗತ್ಯ ಸಲಹೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.
ಪುಷ್ಪಗಿರಿ ಮಹಾಸಂಸ್ಥಾನವು ಶಿಕ್ಷಣ, ಧಾರ್ಮಿಕ, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು, ಉಚಿತ ಸಂಚಾರಿ ಆಸ್ಪತ್ರೆ ಯೋಜನೆ ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ವರದಾನವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಗಣ್ಯರು, ವೈದ್ಯರು, ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಪುಷ್ಪಗಿರಿ ಮಹಾಸಂಸ್ಥಾನದ ಈ ಜನಪರ ಯೋಜನೆಯನ್ನು ಶ್ಲಾಘಿಸಿದರು.
– ಶಿವಕುಮಾರ್ ಕಟ್ಟಾಯ
