ಕೊರಟಗೆರೆ:- ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಬಗೆಹರಿಸಿದರೆ ಲೋಕಾಯುಕ್ತ ಇಲಾಖೆಗೆ ಹೆಚ್ಚಿನ ದೂರುಗಳು ಬರುವುದಿಲ್ಲ ಎಂದು ತುಮಕೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಿವೇಕಾನಂದ ಜಿ. ತುಳಸಿಗೇರಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತುಮಕೂರು ಲೋಕಾಯುಕ್ತ ಇಲಾಖೆ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆ ಸಭೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜನಸಾಮಾನ್ಯರಿಂದ ಬರುವ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕಲ್ಲುಕ್ವಾರೆ ಹಾಗೂ ಕಲ್ಲುಬಂಡೆ ಸ್ಫೋಟದಿಂದ ರೈತರಿಗೆ ಉಂಟಾಗುತ್ತಿರುವ ತೊಂದರೆ, ದಾಖಲೆಗಳಿಲ್ಲದೆ ಜಮೀನುಗಳ ಅಕ್ರಮ ಪರಬಾರೆ, ಸುವರ್ಣಮುಖಿ ನದಿ ಒತ್ತುವರಿ, ಪಡಿತರ ಚೀಟಿ ಸಮಸ್ಯೆ, ಮನೆಗಳ ಇ-ಸ್ವತ್ತು, ಸಾಗುವಳಿ ಚೀಟಿಯಿಂದ ಪಹಣಿಗೆ ದಾಖಲೆ ಪರಿವರ್ತನೆ, ಜಮೀನು ಸರ್ವೆ ವಿಳಂಬ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳ ಗಮನ ಸೆಳೆದರು.
ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಡಾ. ಸಂತೋಷ್ ಹಾಗೂ ಮಂಜುನಾಥ್, ಪೊಲೀಸ್ ನಿರೀಕ್ಷಕ ರಾಜು ಟಿ., ತಹಶೀಲ್ದಾರ್ ಮಂಜುನಾಥ್ ಕೆ., ತಾಪಂ ಇಒ ಅಪೂರ್ವ, ಸಿಪಿಐ ಪುರುಷೋತ್ತಮ್, ಪುರಸಭೆ ಮುಖ್ಯಾಧಿಕಾರಿ ಉಮೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯಮುನಾ, ಸಿಡಿಪಿಒ ಗಂಗಾಧರ್, ಕೆಆರ್ಐಡಿಎಲ್ ಎಇಇ ಸಿಂಧು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಅನಂತರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
56 ಜನರಿಂದ ಅರ್ಜಿಗಳ ಸ್ವೀಕಾರ
ಜಮೀನು ಸರ್ವೆ, ನದಿ ಹಾಗೂ ರಸ್ತೆ ಒತ್ತುವರಿ, ಅಕ್ರಮ ಕಟ್ಟಡ ನಿರ್ಮಾಣ, ಪಡಿತರ ಚೀಟಿ ಸಮಸ್ಯೆ, ಗ್ರಾಮ ಪಂಚಾಯಿತಿ ಇ-ಸ್ವತ್ತು, ಕಲ್ಲುಕ್ವಾರೆಗಳ ಶಬ್ದ ಮಾಲಿನ್ಯ, ಮಾಹಿತಿ ಹಕ್ಕು ಅರ್ಜಿಗಳಿಗೆ ಸ್ಪಂದಿಸದಿರುವುದು, ಪಹಣಿ ಮತ್ತು ಸಾಗುವಳಿ ಚೀಟಿ ಸಮಸ್ಯೆಗಳು ಸೇರಿದಂತೆ ಗಣಿ ಮತ್ತು ಭೂವಿಜ್ಞಾನ, ಆಹಾರ, ಸರ್ವೆ, ಕಂದಾಯ ಹಾಗೂ ಗ್ರಾಮ ಪಂಚಾಯಿತಿ ಇಲಾಖೆಗಳಿಗೆ ಸಂಬಂಧಿಸಿದ ಒಟ್ಟು 56 ಅರ್ಜಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಸ್ವೀಕರಿಸಿದರು. ಕೆಲ ಪ್ರಕರಣಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗಿದ್ದು, ಉಳಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ನದಿ ಒತ್ತುವರಿ ತೆರವಿಗೆ ಮೀನಾಮೇಷ ಆರೋಪ
ಕೊರಟಗೆರೆ ಪಟ್ಟಣದ ಮೂಲಕ ಹರಿಯುವ ಸುವರ್ಣಮುಖಿ ನದಿಯ ಮುಕ್ಕಾಲು ಭಾಗದಷ್ಟು ಪ್ರದೇಶ ಒತ್ತುವರಿಗೆ ಒಳಗಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು. ಹನುಮಂತಪುರ ಸರ್ವೆ ಸಂಖ್ಯೆ 17, 18 ಹಾಗೂ 19ರಲ್ಲಿ ಅಕ್ರಮವಾಗಿ 160ಕ್ಕೂ ಅಧಿಕ ಇ-ಸ್ವತ್ತುಗಳನ್ನು ಮಾಡಲಾಗಿದೆ. ಅಲ್ಲದೆ ಬೋಡಬಂಡೇನಹಳ್ಳಿ ಸರ್ವೆ ಸಂಖ್ಯೆ 44ರಲ್ಲಿ ಹತ್ತಾರು ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ, ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಗ್ರಹಾರ ನಾಗರಾಜು ಅವರು ಲೋಕಾಯುಕ್ತ ಎಸ್ಪಿಗೆ ದೂರು ಸಲ್ಲಿಸಿದರು.
ಮಠದ ಆಸ್ತಿ ಅಕ್ರಮ ಪರಬಾರೆ ಆರೋಪ
ಮುಜರಾಯಿ ಇಲಾಖೆಗೆ ಸೇರಿದ ಕೋಡ್ಲಹಳ್ಳಿಯ ಬಳ್ಳಾರಿ ಉಜ್ಜಯಿನಿ ಪೀಠದ ಖಾಸಾ ಶಾಖೆ ಸತ್ಯಧರ್ಮ ಮಠಕ್ಕೆ ಧಾರ್ಮಿಕ ಕಾರ್ಯಗಳಿಗಾಗಿ ನೀಡಲಾಗಿದ್ದ ಸುಮಾರು 18 ಎಕರೆ ಇನಾಂ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ, ವಕೀಲ ಪರಮೇಶಾರಾಧ್ಯ ಅವರು ಲೋಕಾಯುಕ್ತ ಎಸ್ಪಿಗೆ ದೂರು ಸಲ್ಲಿಸಿದರು. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದರು.
ತಹಶೀಲ್ದಾರ್ ಮಂಜುನಾಥ್ ಕೆ. ಮಾತನಾಡಿ, ತುಮಕೂರು ಲೋಕಾಯುಕ್ತ ಇಲಾಖೆ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆ ಸಭೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಇಲಾಖಾವಾರು ಪ್ರತ್ಯೇಕ ಕೌಂಟರ್ಗಳನ್ನು ತೆರೆಯಲಾಗಿತ್ತು. ಪ್ರತಿಯೊಬ್ಬ ಸಾರ್ವಜನಿಕರಿಗೂ ಸಮಂಜಸ ಉತ್ತರ ನೀಡುವ ಹಾಗೂ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿಸಿದರು.
ಶ್ರೀನಿವಾಸ್ ಕೊರಟಗೆರೆ.
