ರಾಮನಾಥಪುರ, ಜೂ.12: ಹೊಸದಾಗಿ ಮಕ್ಕಳ ಮನೆ ಶಾಲೆಗೆ ದಾಖಲಾದ ಪುಟಾಣಿ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿದ್ದು, ಮಕ್ಕಳು ಭವಿಷ್ಯದಲ್ಲಿ ದೇಶಕ್ಕೆ ಕೀರ್ತಿ ತರುವ ಆದರ್ಶ ಪ್ರಜೆಗಳಾಗಿ ಬೆಳೆಯಲಿ ಎಂದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಹಾರೈಸಿದರು.
ರಾಮನಾಥಪುರದ ಶ್ರೀ ಬಸವೇಶ್ವರ ವೃತ್ತದ ಸಮೀಪದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಮಕ್ಕಳ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೋಷಕರ ಸಮ್ಮುಖದಲ್ಲಿ ಪುಟಾಣಿ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ಮಹೇಶ್, ಮಕ್ಕಳ ಮನೆಗೆ ಪೋಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ದಾಖಲಾತಿಗಾಗಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.

ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಮಾತನಾಡಿ, ಎರಡು ವರ್ಷಗಳ ಹಿಂದೆ ರಾಮನಾಥಪುರ ಹೋಬಳಿಯಲ್ಲಿ ಆರಂಭವಾದ ಮಕ್ಕಳ ಮನೆ ಯೋಜನೆ ಇಂದು ಅರಕಲಗೂಡು ತಾಲ್ಲೂಕಿನ 18 ಕೇಂದ್ರಗಳಿಗೆ ವಿಸ್ತರಿಸಿದ್ದು, ರಾಜ್ಯದ ಇತರ ಜಿಲ್ಲೆಗಳಿಗೂ ಮಾದರಿಯಾಗಿದೆ ಎಂದರು. ಈ ಯೋಜನೆಯು ಅರಕಲಗೂಡು ಕ್ಷೇತ್ರದ ಶಾಸಕ ಎ. ಮಂಜು ಅವರ ಪತ್ನಿ ತಾರಾ ಮಂಜು ಅವರ ಕನಸಿನ ಕೂಸಾಗಿದ್ದು, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿಗೆ ಕಾರಣವಾಗಿದೆ ಎಂದು ತಿಳಿಸಿದರು.

ಅರಕಲಗೂಡು ತಾಲ್ಲೂಕು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಅಧ್ಯಕ್ಷ ಸಿದ್ದರಾಜು ಮಾತನಾಡಿ, ರಾಮನಾಥಪುರ, ಲಕ್ಷ್ಮೀಪುರ, ಕೇರಳಾಪುರ, ಹೊನ್ನೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಕ್ಕಳ ಮನೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 600ಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಅರಕಲಗೂಡು ನೌಕರರ ಸಂಘದ ಮಾಜಿ ಕಾರ್ಯದರ್ಶಿ ಹಾಗೂ ಶಿಕ್ಷಕ ಎಂ.ಆರ್. ದೇವರಾಜು ಮಾತನಾಡಿ, ಗ್ರಾಮೀಣ ರೈತ ಕುಟುಂಬಗಳ ಮಕ್ಕಳು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡಲು ವರ್ಷಕ್ಕೆ ₹40 ಸಾವಿರದಿಂದ ₹50 ಸಾವಿರದವರೆಗೆ ವೆಚ್ಚವಾಗುತ್ತದೆ. ಮಕ್ಕಳ ಮನೆ ಯೋಜನೆಯಿಂದ ಪೋಷಕರ ಆರ್ಥಿಕ ಹೊರೆ ಕಡಿಮೆಯಾಗಿದ್ದು, ಸುಮಾರು ₹1.5 ಕೋಟಿಗೂ ಅಧಿಕ ಮೊತ್ತದ ವೆಚ್ಚವನ್ನು ಉಳಿಸಲು ಸಹಕಾರಿಯಾಗಿದೆ ಎಂದು ಹೇಳಿದರು. ಗ್ರಾಮೀಣ ಜನರು ಈ ಉಚಿತ ಶಿಕ್ಷಣ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಮನೆ ಶಿಕ್ಷಕಿಯರಾದ ಗೀತಾ, ತನುಜ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
– ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
