ಬೆಂಗಳೂರು: ಬಸವೇಶ್ವರ ನಗರದ ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘವು ನೀಡುವ ಪ್ರತಿಷ್ಠಿತ “ಕನ್ನಡ ಸಾಂಸ್ಕೃತಿಕ ಸೇವಾ ರತ್ನ” ಪ್ರಶಸ್ತಿಗೆ ನಾಡಿನ ಹಿರಿಯ ಸಾಹಿತಿ, ನಾಟಕಕಾರ ಗೊರೂರು ಅನಂತರಾಜು ಅವರು ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷರು ಹಾಗೂ ಚಲನಚಿತ್ರ ನಿರ್ದೇಶಕರಾದ ಡಾ. ಗುಣವಂತ ಮಂಜು ಅವರು ಈ ಕುರಿತು ಪ್ರಕಟಣೆ ನೀಡಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನಂತರಾಜು ಅವರು ಸಲ್ಲಿಸಿರುವ ನಾಲ್ಕು ದಶಕಗಳ ನಿರಂತರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ 40 ವರ್ಷಗಳಿಂದ ಸಾಹಿತ್ಯ, ರಂಗಭೂಮಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಗೊರೂರು ಅನಂತರಾಜು ಅವರು ಎಲೆಮರೆ ಕಾಯಿಯಂತಿರುವ ಪ್ರತಿಭಾನ್ವಿತ ಕಲಾವಿದರು, ಗಾಯಕರು, ನೃತ್ಯಪಟುಗಳು, ಚಿತ್ರಕಲಾವಿದರು ಹಾಗೂ ಚಲನಚಿತ್ರ ನಟರ ಪರಿಚಯವನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಟಕ ಹಾಗೂ ಚಲನಚಿತ್ರ ವಿಮರ್ಶೆಗಳ ಮೂಲಕ ಸಾಂಸ್ಕೃತಿಕ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ.
ಅವರು ಪತ್ರಿಕೆಗಳಲ್ಲಿ ಪ್ರಕಟಿಸಿದ ಲೇಖನಗಳನ್ನು ಅಭಿನಯ ಅಭಿವ್ಯಕ್ತಿ, ರಂಗ ಪ್ರಯೋಗ, ನಿಂತು ಹೋದ ರಂಗ ವೈಭವ, ಕಲೆ ಸೆಲೆ, ಗಾನ ನಾಟ್ಯ ಎರಡೂ ರಮ್ಯ, ಹೊಟ್ಟೆಪಾಡಿನ ಮಾರ್ಕೆಟಿನಲ್ಲಿ ಸುಳ್ಳಿನ ಮಾರಾಟ, ಬಣ್ಣದ ಬದುಕು ಯಾಕೂಬ, ರಂಗ ಸಿರಿ ಕಥಾ ಐಸಿರಿ, ರಂಗಾಂತರಂಗ, ಹಾಸನ ತಾಲೂಕು ಸಾಂಸ್ಕೃತಿಕ ಅವಲೋಕನ, ಸಂಗೀತ ನೃತ್ಯ ಸಂಗಮ, ಲೋಕದೃಷ್ಟಿ ಕಲಾಸೃಷ್ಟಿ ಸೇರಿದಂತೆ ಹಲವು ಕೃತಿಗಳ ರೂಪದಲ್ಲಿ ದಾಖಲಿಸಿದ್ದಾರೆ.
ಇವರ ವ್ಯವಸ್ಥೆ, ವೀರಪ್ಪನ್ ಭೂತ ಹಾಗೂ ತೋಳ ಬಂತು ತೋಳ ನಾಟಕಗಳು ರಂಗಭೂಮಿಯಲ್ಲಿ ಯಶಸ್ವಿ ಪ್ರದರ್ಶನಗಳಾಗಿ ಗುರುತಿಸಿಕೊಂಡಿವೆ. ಕಾವ್ಯ, ಕಥೆ, ಹಾಸ್ಯ ಸಾಹಿತ್ಯ, ಲೇಖನ ಹಾಗೂ ಪ್ರವಾಸ ಸಾಹಿತ್ಯ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ.
ಗೊರೂರು ಅನಂತರಾಜು ಅವರ ಸೇವೆ ಇನ್ನಷ್ಟು ವಿಸ್ತಾರವಾಗಿ ಸಮಾಜಕ್ಕೆ ದೊರೆಯಲಿ ಎಂದು ಆಶಿಸಿ, ಕರ್ನಾಟಕ ರಾಜ್ಯ ಬರಹಗಾರರ ಸಂಘ ರಾಜ್ಯಾಧ್ಯಕ್ಷ ಮಧು ನಾಯ್ಕ ಲಂಬಾಣಿ ಅಭಿನಂದನೆ ಸಲ್ಲಿಸಿದ್ದಾರೆ.
