ಹಾಸನ, ಜೂ. 12: ಹಾಸನ ನಗರದ ಜಿಲ್ಲಾ ನ್ಯಾಯಾಲಯದ ಎದುರು ನಡೆದ ರೌಡಿಶೀಟರ್ ಮಂಜೇಶ್ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಕೊಲೆಯ ಹಿಂದಿನ ಸಂಚು ಸಿನಿಮೀಯ ರೀತಿಯಲ್ಲಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬರುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ, ಕೊಲೆಯಾದ ಮಂಜೇಶ್ನ ಚಲನವಲನಗಳ ಮೇಲೆ ಹಂತಕರ ತಂಡ ಹಲವು ದಿನಗಳಿಂದ ನಿಗಾ ಇರಿಸಿತ್ತು. ಮಂಜೇಶ್ ಜೊತೆಗಿದ್ದ ವ್ಯಕ್ತಿಯೊಬ್ಬನ ಮೂಲಕವೇ ಆತನ ಪ್ರತಿಯೊಂದು ಚಲನೆಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿತ್ತು ಎನ್ನಲಾಗಿದೆ.
ಹುಟ್ಟುಹಬ್ಬದ ದಿನವೇ ಹತ್ಯೆಗೆ ಸ್ಕೆಚ್
ಬೆಂಗಳೂರಿನಿಂದ ಗಡಿಪಾರು ಆಗಿದ್ದ ಮಂಜೇಶ್ ಕೆಲ ದಿನಗಳಿಂದ ಚಿಕ್ಕಮಗಳೂರಿನಲ್ಲಿ ವಾಸವಾಗಿದ್ದ. ಜೂನ್ 7ರಂದು ತನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಲು ಯೋಜನೆ ರೂಪಿಸಿದ್ದ ಎನ್ನಲಾಗಿದೆ. ಈ ಮಾಹಿತಿಯನ್ನು ಮುಂಚಿತವಾಗಿಯೇ ಪಡೆದಿದ್ದ ಹಂತಕರ ತಂಡ ಹತ್ಯೆಗೆ ಸಂಚು ರೂಪಿಸಿತ್ತು ಎಂದು ಹೇಳಲಾಗುತ್ತಿದೆ.
ಬೆಂಗಳೂರಿನಿಂದ ಹಾಸನಕ್ಕೆ ಬಂದ ಹಂತಕರ ತಂಡ
ತನಿಖೆ ಪ್ರಕಾರ, ಜೂನ್ 7ರ ರಾತ್ರಿ ಮಂಜೇಶ್ ಸಂಚಾರದ ಖಚಿತ ಮಾಹಿತಿ ಪಡೆದ ಬಳಿಕ ಬೆಂಗಳೂರಿನ ಪರಮೇಶ್ ನೇತೃತ್ವದ ತಂಡ ಮೂರು ಕಾರುಗಳಲ್ಲಿ ಹಾಸನಕ್ಕೆ ಆಗಮಿಸಿತ್ತು. ಆರೋಪಿಗಳು ಚನ್ನಪಟ್ಟಣ ಬೈಪಾಸ್ ಸಮೀಪ ಕಾದು ಕುಳಿತಿದ್ದು, ಮಂಜೇಶ್ ಚಿಕ್ಕಮಗಳೂರಿನಿಂದ ಕೆಎಸ್ಆರ್ಟಿಸಿ ಬಸ್ನಲ್ಲಿ ಹಾಸನ ತಲುಪಿದ್ದಾನೆ ಎನ್ನಲಾಗಿದೆ.

ಬಸ್ ಇಳಿಯುತ್ತಿದ್ದಂತೆ ದಾಳಿ
ಹಾಸನದಿಂದ ಖಾಸಗಿ ಬಸ್ ಮೂಲಕ ಬೆಂಗಳೂರಿಗೆ ತೆರಳಲು ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳು ಮೊದಲು ಕಾರಿನಿಂದ ಡಿಕ್ಕಿ ಹೊಡೆದು ಮಂಜೇಶ್ನನ್ನು ಕೆಳಗೆ ಬೀಳಿಸಿದ್ದಾರೆ. ನಂತರ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
11 ಮಂದಿಯ ಸಂಚು?
ಈ ಕೊಲೆ ಪ್ರಕರಣದಲ್ಲಿ ಸುಮಾರು 11 ಮಂದಿ ಹಲವು ದಿನಗಳಿಂದ ಸಂಚು ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮಂಜೇಶ್ ವಿರುದ್ಧ ಮೂರು ಕೊಲೆ ಪ್ರಕರಣಗಳು ಸೇರಿದಂತೆ ಏಳು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೆ, ಆರೋಪಿಗಳ ಮೇಲೂ ಹಲವು ಕೊಲೆ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.
10 ಆರೋಪಿಗಳ ಬಂಧನ
ಜೂನ್ 7ರ ಮಧ್ಯರಾತ್ರಿ ಹಾಸನದ ಜಿಲ್ಲಾ ನ್ಯಾಯಾಲಯದ ಎದುರು ನಡೆದ ಈ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 10 ಮಂದಿಯನ್ನು ಬಂಧಿಸಿದ್ದು, ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾದ ಪರಮೇಶ್ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.
ಈ ಘಟನೆ ಹಾಸನ ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಲು ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
