ಹಾಸನ, ಜೂ.12: ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಹಾಸನ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ರಾಕ್ಷಾಯಿಣಿ ಉದ್ಘಾಟಿಸಿದರು. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಜಾಥಾದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಅಪರ ಜಿಲ್ಲಾಧಿಕಾರಿ, ಉಪ ಕಾರ್ಮಿಕ ಆಯುಕ್ತ ಗುರುಪ್ರಸಾದ್, ಕಾರ್ಮಿಕ ಅಧಿಕಾರಿ ಆನಂದ್ ರಾಮ್, ರೋಟರಿ ಜಿಲ್ಲೆ 3182ರ ಅಸಿಸ್ಟೆಂಟ್ ಗವರ್ನರ್ ಜೆ.ಎನ್. ಮಂಜುನಾಥ್, Rotary Club of Hassan Sunrise ಅಧ್ಯಕ್ಷ ಹೆಚ್.ಡಿ. ವಜ್ರಕುಮಾರ್, ಕಾರ್ಯದರ್ಶಿ ಕೆ.ಎಸ್. ಯೋಗೇಶ್, ಹಿರಿಯ ಸದಸ್ಯ ಎಂ.ಸಿ. ರಾಜು, ಭೂದೇಶ್, Rotary Midtown ಅಧ್ಯಕ್ಷ ಸಿದ್ದೇಶ್ವರ ಸೇರಿದಂತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಾಥಾ ವೇಳೆ ಬಾಲ ಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಮಕ್ಕಳಿಗೆ ಶಿಕ್ಷಣದ ಹಕ್ಕು ಕಲ್ಪಿಸುವುದು ಮತ್ತು ಬಾಲ ಕಾರ್ಮಿಕ ಪದ್ಧತಿಗೆ ಸಂಪೂರ್ಣ ತೆರೆ ಎಳೆಯುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಇಲಾಖೆ, ಸಂಘ-ಸಂಸ್ಥೆಗಳು ಹಾಗೂ ಭಾಗವಹಿಸಿದವರಿಗೆ ಆಯೋಜಕರು ಕೃತಜ್ಞತೆ ಸಲ್ಲಿಸಿದರು.
