ಬೆಂಗಳೂರು : ರಾಜ್ಯದಲ್ಲಿ ಯುವಜನರಲ್ಲಿ ಮದ್ಯಪಾನದ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ. ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ನೀಡುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.
ಕರ್ನಾಟಕದಲ್ಲಿ ಮದ್ಯ ಖರೀದಿಸಲು ಹಾಗೂ ಸೇವಿಸಲು ಕಾನೂನುಬದ್ಧ ವಯಸ್ಸು 21 ವರ್ಷ ಆಗಿರಬೇಕು. 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವುದು ಅಥವಾ ಮದ್ಯ ಸೇವನೆಗೆ ಅವಕಾಶ ಕಲ್ಪಿಸುವುದು ಕಾನೂನುಬಾಹಿರವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಮದ್ಯ ಮಾರಾಟ ಮಾಡುವ ಸಂಸ್ಥೆಗಳು ಪ್ರತಿಯೊಬ್ಬ ಗ್ರಾಹಕರ ಗುರುತಿನ ಚೀಟಿ (ಐಡಿ) ಪರಿಶೀಲಿಸಿ ಸಂಗ್ರಹಿಸಬೇಕೆಂಬ ಕಡ್ಡಾಯ ನಿಯಮ ಇಲ್ಲದಿದ್ದರೂ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಂತೆ ಕಾಣುವವರ ವಯಸ್ಸು ದೃಢೀಕರಿಸುವ ಜವಾಬ್ದಾರಿ ಸಂಸ್ಥೆಗಳ ಮೇಲಿದೆ ಎಂದು ತಿಳಿಸಿದೆ.
ಅಂತಹ ವ್ಯಕ್ತಿಗಳು ವಯಸ್ಕರೊಂದಿಗೆ ಬಂದಿದ್ದರೂ ಸಹ ಅವರಿಗೆ ಮದ್ಯಪಾನಕ್ಕೆ ಅವಕಾಶ ನೀಡಬಾರದು. ಹೋಟೆಲ್, ಬಾರ್, ರೆಸ್ಟೋರೆಂಟ್ ಹಾಗೂ ಇತರ ಪರವಾನಗಿ ಪಡೆದ ಮದ್ಯ ಮಾರಾಟ ಕೇಂದ್ರಗಳು ತಮ್ಮ ಆವರಣದಲ್ಲಿ ಅಪ್ರಾಪ್ತ ವಯಸ್ಕರು ಮದ್ಯ ಸೇವಿಸದಂತೆ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ವಹಿಸಬೇಕು ಎಂದು ಸೂಚಿಸಲಾಗಿದೆ.
ನಿಯಮ ಉಲ್ಲಂಘನೆ ಅಥವಾ ನಿರ್ಲಕ್ಷ್ಯ ಕಂಡುಬಂದಲ್ಲಿ ಪರವಾನಗಿ ಪಡೆದ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಸೇರಿದಂತೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
