ಚನ್ನರಾಯಪಟ್ಟಣ : ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಆನೆಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಉಮೇಶ್ ವಹಿಸಿದ್ದರು. ವಿದ್ಯಾರ್ಥಿನಿ ಕುಮಾರಿ ಭೂಮಿಕಾ ಅವರು ವಿಶ್ವ ಬಾಲಕಾರ್ಮಿಕರ ವಿರೋಧಿ ದಿನದ ಉದ್ದೇಶಗಳು ಹಾಗೂ ಅದರ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಸಮಾಜ ವಿಜ್ಞಾನ ಶಿಕ್ಷಕಿ ವಿಜಯ ಮಾತನಾಡಿ, “ಮಕ್ಕಳು ದೇಶದ ಅಮೂಲ್ಯ ಆಸ್ತಿ. ಈ ಆಸ್ತಿಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಕಾರ್ಯದಲ್ಲಿ ಕೈಜೋಡಿಸಬೇಕು” ಎಂದು ಹೇಳಿದರು.

ಶಿಕ್ಷಕ ಸುರೇಶ್ ಕುಮಾರ್ ಅವರು ಮಾತನಾಡಿ, “ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ. ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಗಾಗಿ ಕೈಗೊಳ್ಳಲಾಗುತ್ತಿರುವ ವಿವಿಧ ಕಾರ್ಯಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗಿದೆ” ಎಂದು ತಿಳಿಸಿದರು.
ಬಳಿಕ ಶಿಕ್ಷಕಿ ಕಲಾವತಿ ಅವರು ವಿದ್ಯಾರ್ಥಿಗಳಿಗೆ ಬಾಲಕಾರ್ಮಿಕ ವಿರೋಧಿ ದಿನದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಾಗರಾಜು, ಎಂ.ಆರ್. ದೊರೆಸ್ವಾಮಿ, ಆಶಾರಾಣಿ, ದಿಲೀಪ್ ಎಸ್.ಕೆ. ಸೇರಿದಂತೆ ಇತರರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ
