ಬೆಂಗಳೂರು : ಒಂದು ಜನಾಂಗದ ಸಾಹಿತ್ಯ, ಸಂಸ್ಕೃತಿ, ಭಾಷೆ ಸಾಮಾಜಿಕ ವ್ಯವಸ್ಥೆಗಳನ್ನು ಅರಿಯಲು ಕನ್ನಡ ನಾಡನ್ನು ಆಳಿದ ರಾಜ ಮಹಾರಾಜರ ಕಾಲದ ಇತಿಹಾಸದ ಅಧ್ಯಯನ ಬಹಳ ಮಹತ್ವವನ್ನು ತಿಳಿಸುತ್ತದೆ ಎಂದು ಶಾಸನ ತಜ್ಞರು, ಪುರಾತತ್ವ ಇಲಾಖೆ ವಸ್ತು ಸಂಗ್ರಹಾಲಯ ನಿರ್ದೇಶಕಿ ಡಾ.ಸ್ಮಿತಾ ಡಿ.ರೆಡ್ಡಿ ಅಭಿಪ್ರಾಯಪಟ್ಟರು.

ಅವರು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಗೌಡತಿಯರ ಸೇನೆಯ ವತಿಯಿಂದ ಆಯೋಜಿಸಲಾಗಿದ್ದ *ನಮ್ಮ ಕುಲ ಶಿಲ್ಪಿಗಳು ಮಾಸಿಕ 3ನೇ ಉಪನ್ಯಾಸ ಮಾಲಿಕೆಯಲ್ಲಿ “ಗಂಗರಸರುಮತ್ತು ಗಣಶಾಸ್ತ್ರ ಪ್ರಾವೀಣ್ಯತೆ” ವಿಷಯ ಕುರಿತು ಉಪನ್ಯಾಸ ನೀಡಿದರು. ಒಂದು ರಾಜ್ಯ,ರಾಷ್ಟ್ರದ ಹಿರಿಮೆ ಗರಿಮೆ ತಿಳಿಯಲು ರಾಜಮಹಾರಾಜರ ಕಾಲದ ಆಡಳಿತವು ಆಕಾಲದ ಸಾಂಸ್ಕೃತಿಕ ಮಹತ್ವವನ್ನು ಸಾರುವ ಕೆಲಸ ಆಗುತ್ತದೆ. ಯಾವುದೇ ಜನಾಂಗವು ಇವತ್ತಿಗೂ ಸಂಸ್ಕಾರ, ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗಂಗರಸರುಗಳು ಪ್ರಮುಖವಾಗಿ ಕೋಲಾರ, ರಾಮನಗರ, ತುಮಕೂರು ಹೀಗೆ ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಅನುವಾದಕರು,ಜಾನಪದ ವಿದ್ವಾಂಸರಾದ ಡಾ.ಕೆ.ಆರ್.ಸಂಧ್ಯಾರೆಡ್ಡಿ ವಹಿಸಿ ಒಕ್ಕಲಿಗರು ಇಂದು ತಮ್ಮ ಆಚಾರ,ವಿಚಾರದ ಹಿನ್ನೆಲೆಯಲ್ಲಿ ಗಂಗಡಿಕಾರ, ಮೊರಸು, ಕುಂಚಿಟಿಗ, ಪೆಟ್ಟಿಗೆ,ಬುಜ್ಜಣಿಗೆ ಹೀಗೆ ಹರಿದ ಹಂಚಿ ಹೋಗುತ್ತಿದ್ದಾರೆ. ಇತಿಹಾಸವನ್ನು ಸರಿಯಾದ ರೀತಿಯಲ್ಲಿ ಅರ್ಥೈಸದೇ ಹೋದರೆ ನಮ್ಮ ಸಂಸ್ಕೃತಿ ಮರೆಯಾಗಿ ಹೋದೀತೆಂದು ಎಚ್ಚರಿಸಿದರು. ಮುಖ್ಯ ಅತಿಥಿಗಳಾಗಿ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಧರ್ಮದರ್ಶಿ ಡಬ್ಲ್ಯೂ.ಡಿ.ಅಶೋಕ್ , ಬೆಂಗಳೂರು ನಗರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಅನಿಕೇತನ ಮಾಯಣ್ಣ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಸದಸ್ಯರಾದ ಡಾ.ಎಂ.ಎಸ್.ಶಶಿಕಲಾಗೌಡ, ಸಾಹಿತಿ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ), ಗೌಡತಿಯರ ಸೇನೆಯ ಸಂಸ್ಥಾಪಕ ಅಧ್ಯಕ್ಷ ಬಿ.ಕೃಷ್ಣೇಗೌಡ, ಅಧ್ಯಕ್ಷೆ ಕೆಂಪಾಜಮ್ಮ, ಪ್ರಧಾನ ಕಾರ್ಯದರ್ಶಿ ರೂಪಾಗೌಡ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬಿ.ಮಹೇಶ್ (ಲಾಲ್ ಬಾಗ್ ಕಾರ್ಮಿಕ ಮುಖಂಡರು), ಹೆಚ್.ಕೆ.ಬೊಮ್ಮೇಗೌಡ (ದೇಶಮುಖ ಪತ್ರಿಕೆ ಸಂಪಾದಕರು), ಚಿಕ್ಕಮಗಳೂರಿನ ಕು.ಭಾಗ್ಯಶ್ರೀಗೌಡ ( ಸುಗಮಸಂಗೀತ), ಹೆಚ್ .ಡಿ.ಪುಷ್ಪಾ (ಸಾಮಾಜಿಕ ಕ್ಷೇತ್ರ) ರವರುಗಳಿಗೆ ಸೇವಾಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಭುವನೇಶ್ವರಿ ಕಲಾ ಬಳಗದ ಅಧ್ಯಕ್ಷರಾದ ಎಲ್.ಬಸವಲಿಂಗ ಮತ್ತು ತಂಡದವರು ಸುಶ್ರಾವ್ಯವಾಗಿ ಕನ್ನಡ ನಾಡು ನುಡಿ ಗೀತೆಗಳನ್ನು ಹಾಡಿ ಮನರಂಜಿಸಿದರು. ಕವಯಿತ್ರಿ ಕು.ಕೆ.ಟಿ.ಲತಾ ಚಿಕ್ಕ ಬಾಣಾವರ ಅವರ ನಿರೂಪಣೆಯಲ್ಲಿ ಸಮಾರಂಭವು ಬಹಳ ಸುಂದರವಾಗಿ ಮೂಡಿಬಂದಿತು.
