ಬೆಂಗಳೂರು, ಜೂನ್ 17: ರಿಯಲ್ ಎಸ್ಟೇಟ್ ಮತ್ತು ಆಸ್ತಿ ನಿರ್ವಹಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹಿಮಾಲಿಯಾ ಪ್ರೈಮ್ ಅಸೆಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಬೆಂಗಳೂರಿನ ಹೊರವಲಯದ ಹೆಸರಘಟ್ಟದ ಬಳಿ ಇರುವ ಪ್ರಸಿದ್ಧ ಪರಿಸರ ಸ್ನೇಹಿ ರೆಸಾರ್ಟ್ ‘ಅವರ್ ನೇಟಿವ್ ವಿಲೇಜ್’ ಅನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿದೆ. ಈ ಮೂಲಕ ಸಂಸ್ಥೆಯು ಆತಿಥ್ಯ ಮತ್ತು ವೆಲ್ನೆಸ್ ಕ್ಷೇತ್ರಕ್ಕೆ ಅಧಿಕೃತವಾಗಿ ಪ್ರವೇಶಿಸಿದೆ.
ಖ್ಯಾತ ಖಾಸಗಿ ಈಕ್ವಿಟಿ ಹೂಡಿಕೆ ಸಂಸ್ಥೆ ಜುಪಿಟರ್ ಕ್ಯಾಪಿಟಲ್ ಬೆಂಬಲಿತ ಹಿಮಾಲಿಯಾ ಪ್ಲಾಟ್ಫಾರ್ಮ್, ಇತ್ತೀಚೆಗೆ ಪೂರ್ಣಗೊಂಡ ವಹಿವಾಟಿನ ಮೂಲಕ ರೆಸಾರ್ಟ್ನ ಶೇ.100ರಷ್ಟು ಮಾಲೀಕತ್ವವನ್ನು ತನ್ನದಾಗಿಸಿಕೊಂಡಿದೆ. ಈ ಸ್ವಾಧೀನವು ಸಂಸ್ಥೆಯ ವಿಸ್ತರಣಾ ಕಾರ್ಯತಂತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಒಟ್ಟು 4.65 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ರೆಸಾರ್ಟ್ನಲ್ಲಿ ಪ್ರಸ್ತುತ 24 ಕೊಠಡಿಗಳಿದ್ದು, ಉಳಿದ 1.65 ಎಕರೆ ಭೂಮಿಯನ್ನು ಭವಿಷ್ಯದ ವಿಸ್ತರಣೆಗೆ ಮೀಸಲಿಡಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ರೆಸಾರ್ಟ್ನ ಮೂಲಸೌಕರ್ಯ ಮತ್ತು ಸೇವಾ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲು ಕನಿಷ್ಠ ₹25 ಕೋಟಿ ಹೂಡಿಕೆ ಮಾಡಲು ಸಂಸ್ಥೆ ಯೋಜಿಸಿದೆ. ಜೊತೆಗೆ, ಕೊಠಡಿಗಳ ಸಂಖ್ಯೆಯನ್ನು 24ರಿಂದ 40ಕ್ಕೆ ಹೆಚ್ಚಿಸುವ ಗುರಿಯನ್ನೂ ಹೊಂದಿದೆ.
ರೆಸಾರ್ಟ್ನ ದೈನಂದಿನ ಕಾರ್ಯಾಚರಣೆಯನ್ನು ನಿರ್ವಹಿಸಲು ಐಷಾರಾಮಿ ವೆಲ್ನೆಸ್ ಬ್ರ್ಯಾಂಡ್ ನಿರಾಮಯ ಲೈಫ್ ಜೊತೆ ಹಿಮಾಲಿಯಾ ಪ್ರೈಮ್ ಅಸೆಟ್ಸ್ ಪಾಲುದಾರಿಕೆ ಮಾಡಿಕೊಂಡಿದೆ.
ಈ ಕುರಿತು ಮಾತನಾಡಿದ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಂಶಿ ಸಾಯಿ, “ಪ್ರಕೃತಿ, ಸ್ಥಳೀಯ ಸಂಸ್ಕೃತಿ ಮತ್ತು ಸ್ವಾಸ್ಥ್ಯವನ್ನು ಒಗ್ಗೂಡಿಸುವ ಆತಿಥ್ಯ ಸೇವೆಗಳೇ ಭವಿಷ್ಯದ ಬೆಳವಣಿಗೆಯ ದಿಕ್ಕು. ಅವರ್ ನೇಟಿವ್ ವಿಲೇಜ್ ಈ ಮೌಲ್ಯಗಳನ್ನು ಪ್ರತಿಬಿಂಬಿಸುವ ಅಪರೂಪದ ತಾಣವಾಗಿದ್ದು, ನಮ್ಮ ಬೆಳೆಯುತ್ತಿರುವ ಪೋರ್ಟ್ಫೋಲಿಯೊಗೆ ಅತ್ಯುತ್ತಮ ಸೇರ್ಪಡೆಯಾಗಿದೆ” ಎಂದು ಹೇಳಿದರು.
ಹಿಮಾಲಿಯಾ ಸಂಸ್ಥೆಯ ಆತಿಥ್ಯ ಪೋರ್ಟ್ಫೋಲಿಯೊದಲ್ಲಿ ಈಗ ಮೂರು ಪ್ರಮುಖ ರೆಸಾರ್ಟ್ಗಳಿದ್ದು, ಕೇರಳದ ಕೋವಲಂ ಹಾಗೂ ಕುಮರಕಂನಲ್ಲಿರುವ ರೆಸಾರ್ಟ್ಗಳೂ ಸೇರಿವೆ. ಮುಂದಿನ ಮೂರುರಿಂದ ನಾಲ್ಕು ವರ್ಷಗಳಲ್ಲಿ ವೆಲ್ನೆಸ್ ರೆಸಾರ್ಟ್ಗಳು, ಬ್ರ್ಯಾಂಡೆಡ್ ರೆಸಿಡೆನ್ಸ್ಗಳು, ಫಾರ್ಮ್ಹೌಸ್ಗಳು, ಪ್ಲಾಟ್ ಅಭಿವೃದ್ಧಿ ಯೋಜನೆಗಳು ಮತ್ತು ವಿಶೇಷ ಕ್ಲಬ್ಗಳನ್ನು ಒಳಗೊಂಡ ಹಲವು ಯೋಜನೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
1986ರಲ್ಲಿ ಸ್ಥಾಪನೆಯಾದ ಹಿಮಾಲಿಯಾ ಪ್ರೈಮ್ ಅಸೆಟ್ಸ್, ಆತಿಥ್ಯ, ವಾಣಿಜ್ಯ ರಿಯಲ್ ಎಸ್ಟೇಟ್ ಹಾಗೂ ಬಿಸಿನೆಸ್ ಪಾರ್ಕ್ ಅಭಿವೃದ್ಧಿ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದು, ಭಾರತದಲ್ಲಿ ಪ್ರೀಮಿಯಂ ಆಸ್ತಿ ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದೆ.
