ಬೆಂಗಳೂರು, ಜೂನ್ 18: ಕೃತಕ ಬುದ್ಧಿಮತ್ತೆ (ಎಐ) ಮತ್ತು ಸ್ಟಾರ್ಟ್ಅಪ್ ಆವಿಷ್ಕಾರ ಕ್ಷೇತ್ರದಲ್ಲಿ ಬೆಂಗಳೂರು-ಕರ್ನಾಟಕ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು, ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಎಐ ಆಧಾರಿತ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಅಲ್ಲದೆ, ಒಟ್ಟಾರೆ ಪ್ರದರ್ಶನ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ಆ್ಯಂಡ್ಡಿ) ವಿಭಾಗಗಳಲ್ಲಿ ಜಾಗತಿಕ ಟಾಪ್-10 ಸ್ಥಾನವನ್ನು ಪಡೆದುಕೊಂಡಿದೆ.
ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಹಭಾಗಿತ್ವದಲ್ಲಿ ಪ್ರಕಟಿಸಿರುವ ಜಾಗತಿಕ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ ವರದಿ (ಜಿಎಸ್ಇಆರ್) 2026ರಲ್ಲಿ ಈ ಸಾಧನೆ ದಾಖಲಾಗಿದೆ. ವಿಶ್ವದ 350ಕ್ಕೂ ಹೆಚ್ಚು ಆವಿಷ್ಕಾರ ಕೇಂದ್ರಗಳ ವ್ಯಾಪ್ತಿಯಲ್ಲಿರುವ 5.5 ಮಿಲಿಯನ್ಗಿಂತ ಹೆಚ್ಚು ಕಂಪನಿಗಳ ಮಾಹಿತಿಯನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.
ಜಾಗತಿಕ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಗಳ ಪಟ್ಟಿಯಲ್ಲಿ ಬೆಂಗಳೂರು-ಕರ್ನಾಟಕ 15ನೇ ಸ್ಥಾನ ಪಡೆದಿದ್ದು, ಭಾರತದ ಪ್ರಮುಖ ಸ್ಟಾರ್ಟ್ಅಪ್ ಕೇಂದ್ರ ಎಂಬ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ. 2021ರಿಂದ 2025ರ ಅವಧಿಯಲ್ಲಿ ಪರಿಸರ ವ್ಯವಸ್ಥೆಯ ಒಟ್ಟು ಮೌಲ್ಯವು ಶೇ.190ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ 46 ಬಿಲಿಯನ್ ಡಾಲರ್ ಮೌಲ್ಯದ ಸ್ಟಾರ್ಟ್ಅಪ್ ಎಕ್ಸಿಟ್ಗಳು, 39 ಬಿಲಿಯನ್ ಡಾಲರ್ ವೆಂಚರ್ ಕ್ಯಾಪಿಟಲ್ ಹೂಡಿಕೆ ಹಾಗೂ 30 ಸಕ್ರಿಯ ಯೂನಿಕಾರ್ನ್ಗಳನ್ನು ಹೊಂದಿರುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎಐ ಕ್ಷೇತ್ರದಲ್ಲಿ ಕರ್ನಾಟಕದ ಪ್ರಾಬಲ್ಯ ವಿಶೇಷವಾಗಿ ಗಮನಸೆಳೆದಿದೆ. ದೇಶದ ಒಟ್ಟು ಎಐ ವೆಂಚರ್ ಫಂಡಿಂಗ್ನ ಸುಮಾರು ಶೇ.58ರಷ್ಟು ಹೂಡಿಕೆ ಕರ್ನಾಟಕಕ್ಕೆ ಹರಿದುಬರುತ್ತಿದ್ದು, ಎಐ-ನೇಟಿವ್ ಕ್ಲಸ್ಟರ್ ವಿಭಾಗದಲ್ಲಿ ಏಷ್ಯಾದಲ್ಲೇ ಎರಡನೇ ಸ್ಥಾನ ಪಡೆದಿದೆ.
ಸಂಶೋಧನೆ ಮತ್ತು ಆವಿಷ್ಕಾರ ಕ್ಷೇತ್ರದಲ್ಲಿಯೂ ಬೆಂಗಳೂರು-ಕರ್ನಾಟಕ ಮಹತ್ವದ ಪ್ರಗತಿ ಸಾಧಿಸಿದೆ. ಕಳೆದ ವರ್ಷದ ಜಾಗತಿಕ ಟಾಪ್-30 ಸ್ಥಾನದಿಂದ ನೇರವಾಗಿ ಜಾಗತಿಕ ಟಾಪ್-10ಕ್ಕೆ ಏರಿಕೆಯಾಗಿದೆ. ಪೇಟೆಂಟ್ಗಳ ಸಂಖ್ಯೆ ಹೆಚ್ಚಳ, ಸಂಶೋಧನೆಗಳ ವಾಣಿಜ್ಯೀಕರಣ ಹಾಗೂ ಐಐಎಸ್ಸಿ, ಇಸ್ರೋ, ಡಿಆರ್ಡಿಒ, ಸಿ-ಡಾಕ್ ಮತ್ತು ಎನ್ಎಎಲ್ ಮುಂತಾದ ಸಂಸ್ಥೆಗಳ ಕೊಡುಗೆ ಇದಕ್ಕೆ ಪ್ರಮುಖ ಕಾರಣವಾಗಿದೆ.
ಸ್ಟಾರ್ಟ್ಅಪ್ ಬೆಳವಣಿಗೆಯ ವೇಗವೂ ಗಮನಾರ್ಹವಾಗಿದ್ದು, ಜಾಗತಿಕ ಸರಾಸರಿ ಎಕ್ಸಿಟ್ ಅವಧಿ 11.1 ವರ್ಷಗಳಾಗಿದ್ದರೆ, ಬೆಂಗಳೂರಿನಲ್ಲಿ ಅದು ಕೇವಲ 8.2 ವರ್ಷಗಳಷ್ಟಿದೆ. ಇದು ಹೂಡಿಕೆದಾರರಿಗೆ ವೇಗವಾಗಿ ಲಾಭದ ಅವಕಾಶಗಳನ್ನು ಸೃಷ್ಟಿಸುತ್ತಿದೆ.
ಈ ಸಾಧನೆ ಕುರಿತು ಪ್ರತಿಕ್ರಿಯಿಸಿದ ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ, “ಬೆಂಗಳೂರು-ಕರ್ನಾಟಕ ಈಗ ಕೇವಲ ಭಾರತದ ಸ್ಟಾರ್ಟ್ಅಪ್ ರಾಜಧಾನಿ ಮಾತ್ರವಲ್ಲ, ಜಾಗತಿಕ ಡೀಪ್ಟೆಕ್ ಮತ್ತು ಎಐ ಆವಿಷ್ಕಾರದ ಕೇಂದ್ರವಾಗಿಯೂ ರೂಪುಗೊಳ್ಳುತ್ತಿದೆ. ಪ್ರತಿಭೆ, ಸಂಶೋಧನೆ ಮತ್ತು ಉದ್ಯಮಶೀಲತೆಯಲ್ಲಿ ನಾವು ಮಾಡಿರುವ ಹೂಡಿಕೆಗಳ ಫಲವಾಗಿ ಈ ಮನ್ನಣೆ ದೊರೆತಿದೆ,” ಎಂದು ತಿಳಿಸಿದ್ದಾರೆ.
ಜಿಎಸ್ಇಆರ್ 2026 ವರದಿ ಪ್ರಕಾರ, ಬೆಂಗಳೂರು-ಕರ್ನಾಟಕದ ಬೆಳವಣಿಗೆ ದರವು ಏಷ್ಯಾದ ಸರಾಸರಿಗಿಂತ ಮೂರು ಪಟ್ಟು ಹೆಚ್ಚಾಗಿದ್ದು, ಸ್ಟಾರ್ಟ್ಅಪ್ ಎಕ್ಸಿಟ್ ಮೌಲ್ಯದಲ್ಲಿ ಸಿಂಗಾಪುರವನ್ನೂ ಹಿಂದಿಕ್ಕಿದೆ. ಈ ಸಾಧನೆ ರಾಜ್ಯವನ್ನು ಜಾಗತಿಕ ಆವಿಷ್ಕಾರ ನಕ್ಷೆಯಲ್ಲಿ ಇನ್ನಷ್ಟು ಬಲವಾಗಿ ಗುರುತಿಸಿದೆ.
