ಬೆಂಗಳೂರು : ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಯುವ UGCET-2026ರ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಗೆ ಸಂಬಂಧಿಸಿದ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿದೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಐಎಎಸ್ ಅವರು ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಅಭ್ಯರ್ಥಿಗಳಿಗೆ ಶನಿವಾರದಿಂದಲೇ ಕಾಲೇಜು ಹಾಗೂ ಕೋರ್ಸ್ಗಳ ಆಯ್ಕೆ (ಆಪ್ಷನ್ಸ್) ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಜೂನ್ 30ರವರೆಗೆ ತಮ್ಮ ಆಯ್ಕೆಗಳನ್ನು ದಾಖಲಿಸಬಹುದಾಗಿದೆ.
ಜುಲೈ 6ರಂದು ಅಣಕು (ಮಾಕ್) ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ. ಅಣಕು ಫಲಿತಾಂಶದ ಬಳಿಕ ಅಭ್ಯರ್ಥಿಗಳಿಗೆ ತಮ್ಮ ಆಯ್ಕೆಗಳನ್ನು ಸೇರಿಸಲು, ಅಳಿಸಲು ಅಥವಾ ಬದಲಾಯಿಸಲು ಜುಲೈ 6ರಿಂದ 9ರವರೆಗೆ ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳು ಸಲ್ಲಿಸಿದ ಅಂತಿಮ ಆಯ್ಕೆಗಳ ಆಧಾರದ ಮೇಲೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಜುಲೈ 15ರಂದು ಪ್ರಕಟಿಸಲಾಗುವುದು ಎಂದು ಕೆಇಎ ತಿಳಿಸಿದೆ.
ಇದೇ ವೇಳೆ, ನೀಟ್-2026 ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಜೂನ್ 22ರ ನಂತರ ತಮ್ಮ ಆಯ್ಕೆಗಳನ್ನು ದಾಖಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವ ಅಭ್ಯರ್ಥಿಗಳು ಕೆಇಎ ಪ್ರಕಟಿಸಿರುವ ವೇಳಾಪಟ್ಟಿಯನ್ನು ಗಮನಿಸಿ, ನಿಗದಿತ ಅವಧಿಯೊಳಗೆ ತಮ್ಮ ಆಯ್ಕೆಗಳನ್ನು ದಾಖಲಿಸುವಂತೆ ಪ್ರಾಧಿಕಾರ ಮನವಿ ಮಾಡಿದೆ.

