ಮಧುಗಿರಿ:- ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಅಂಗಡಿ ಮಳಿಗೆಗಳಲ್ಲಿ ನಿಯಮ ಉಲ್ಲಂಘನೆಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದಿದ್ದು, ಪ್ರಯಾಣಿಕರು ಹಾಗೂ ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಮಾಹಿತಿಗಳ ಪ್ರಕಾರ, ಬಸ್ ನಿಲ್ದಾಣದ ಅಂಗಡಿ ಮಳಿಗೆಗಳನ್ನು ಹರಾಜಿನ ಮೂಲಕ ಪಡೆದ ಕೆಲ ವ್ಯಾಪಾರಿಗಳು ನಿಗದಿಪಡಿಸಿದ ಮಳಿಗೆ ವ್ಯಾಪ್ತಿಗಿಂತ ಹೆಚ್ಚಿನ ಜಾಗವನ್ನು ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅಂಗಡಿಗಳೊಳಗೆ ಇರಬೇಕಾದ ವಸ್ತುಗಳನ್ನು ಸಾರ್ವಜನಿಕರು ಓಡಾಡುವ ದಾರಿಯಲ್ಲೇ ಇಡಲಾಗುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.
ಪ್ರಯಾಣಿಕರಿಗೆ ತೊಂದರೆ, ಸುರಕ್ಷತೆಗೂ ಧಕ್ಕೆ
ಬಸ್ ನಿಲ್ದಾಣದಲ್ಲಿ ದಿನನಿತ್ಯ ಸಾವಿರಾರು ಪ್ರಯಾಣಿಕರು ಓಡಾಡುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಓಡಾಟಕ್ಕೆ ಮೀಸಲಾದ ಸ್ಥಳಗಳಲ್ಲಿ ವ್ಯಾಪಾರ ವಸ್ತುಗಳನ್ನು ಹಾಕಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ವಿಶೇಷವಾಗಿ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಈ ಪರಿಸ್ಥಿತಿ ತೊಂದರೆ ಉಂಟುಮಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ಆರೋಪ
ಕೆಲವು ಅಂಗಡಿಗಳಲ್ಲಿ ಅವಧಿ ಮುಗಿದ ತಿನಿಸುಗಳು ಹಾಗೂ ಗುಣಮಟ್ಟದ ಬಗ್ಗೆ ಅನುಮಾನ ಹುಟ್ಟಿಸುವ ಆಹಾರ ಪದಾರ್ಥಗಳು ಮಾರಾಟವಾಗುತ್ತಿವೆ ಎಂಬ ದೂರುಗಳು ಕೇಳಿಬಂದಿವೆ. ಆಹಾರ ಸುರಕ್ಷತಾ ಇಲಾಖೆಯ ಪರವಾನಗಿ (Food License) ಇಲ್ಲದೆ ತಿನಿಸುಗಳನ್ನು ಮಾರಾಟ ಮಾಡುತ್ತಿರುವುದರ ಬಗ್ಗೆ ಸಹ ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ.
*ಎಂಆರ್ಪಿ ಗಿಂತ ಹೆಚ್ಚಿನ ಬೆಲೆ ವಸೂಲಿ?*
ಕೆಲ ವ್ಯಾಪಾರಿಗಳು ವಸ್ತುಗಳ ಮೇಲೆ ನಮೂದಿಸಿರುವ ಗರಿಷ್ಠ ಚಿಲ್ಲರೆ ಬೆಲೆ (MRP) ಗಿಂತ ಹೆಚ್ಚಿನ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ. ಜೊತೆಗೆ ಎಂಆರ್ಪಿ ವಿವರಗಳೇ ಇಲ್ಲದ ಆಹಾರ ಪದಾರ್ಥಗಳ ಮಾರಾಟ ನಡೆಯುತ್ತಿರುವ ಬಗ್ಗೆ ಸಹ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಿಷೇಧಿತ ವಸ್ತುಗಳ ಮಾರಾಟದ ಆರೋಪ
ಬಸ್ ನಿಲ್ದಾಣದ ವ್ಯಾಪ್ತಿಯಲ್ಲಿ ಸಿಗರೇಟ್, ಗುಟ್ಕಾ ಸೇರಿದಂತೆ ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳ ಮಾರಾಟ ನಡೆಯುತ್ತಿದೆ ಎನ್ನಲಾಗಿದ್ದು, ಏಕಬಳಕೆ ಪ್ಲಾಸ್ಟಿಕ್ ಕವರ್ಗಳ ಮಾರಾಟವೂ ಮುಂದುವರಿದಿದೆ ಎಂಬ ದೂರುಗಳು ಕೇಳಿಬಂದಿವೆ.
ಅಧಿಕಾರಿಗಳ ಗಮನಕ್ಕೆ ತರಲು ಸಾರ್ವಜನಿಕರ ಮನವಿ
ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಅಧಿಕಾರಿಗಳು, ಆಹಾರ ಸುರಕ್ಷತಾ ಇಲಾಖೆ, ತೂಕ ಮತ್ತು ಅಳತೆ ಇಲಾಖೆ ಹಾಗೂ ಮಧುಗಿರಿ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಪ್ರಯಾಣಿಕರಿಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಕ್ರಮ ಕೈಗೊಳ್ಳುತ್ತಾರೆಯೇ ಅಧಿಕಾರಿಗಳು?
ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಬಸ್ ನಿಲ್ದಾಣದಲ್ಲೇ ನಿಯಮ ಉಲ್ಲಂಘನೆಗಳು ನಡೆಯುತ್ತಿರುವ ಆರೋಪಗಳು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ತ್ವರಿತ ಕ್ರಮ ಕೈಗೊಳ್ಳುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.
ವಿಶೇಷ ವರದಿ : ಶ್ರೀನಿವಾಸ್ ಕೊರಟಗೆರೆ
