ಮಧುಗಿರಿ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿರುವ ಕೆಲವು ಅಂಗಡಿ ಮಳಿಗೆಗಳು ನಿಗದಿತ ನಿಯಮಗಳನ್ನು ಪಾಲಿಸದೇ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.
ಹಾರಾಜಿನಲ್ಲಿ ನಿಗದಿಪಡಿಸಿದ ಜಾಗಕ್ಕಿಂತ ಹೆಚ್ಚಿನ ಪ್ರದೇಶವನ್ನು ಕೆಲ ಅಂಗಡಿದಾರರು ಒತ್ತುವರಿ ಮಾಡಿಕೊಂಡಿದ್ದು, ಅಂಗಡಿಗಳೊಳಗೆ ಇಡಬೇಕಾದ ವಸ್ತುಗಳನ್ನು ಸಾರ್ವಜನಿಕರು ಓಡಾಡುವ ಸ್ಥಳದಲ್ಲೇ ಇಟ್ಟಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರಲಾಗಿದೆ.
ಕೆಲ ಅಂಗಡಿಗಳಲ್ಲಿ ಅವಧಿ ಮೀರಿದ ತಿನಿಸುಗಳು, ಆಹಾರ ಪರವಾನಗಿ (ಫುಡ್ ಲೈಸೆನ್ಸ್) ಇಲ್ಲದ ಉತ್ಪನ್ನಗಳು, ಎಂಆರ್ಪಿ ಮುದ್ರಣವಿಲ್ಲದ ಆಹಾರ ಪದಾರ್ಥಗಳು ಹಾಗೂ ಕಳಪೆ ಗುಣಮಟ್ಟದ ತಿನಿಸುಗಳು ಮಾರಾಟವಾಗುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ, ಎಂಆರ್ಪಿಗಿಂತ ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಸಿಗರೇಟ್, ಗುಟ್ಕಾ ಹಾಗೂ ನಿಷೇಧಿತ ಪ್ಲಾಸ್ಟಿಕ್ ಕವರ್ಗಳ ಮಾರಾಟವೂ ನಡೆಯುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಂಬಂಧಪಟ್ಟ ಕೆಎಸ್ಆರ್ಟಿಸಿ ಹಾಗೂ ಮಧುಗಿರಿ ಪುರಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
