ಕೊರಟಗೆರೆ :- ಪಟ್ಟಣದಲ್ಲಿ ಭಾನುವಾರ ಸಂಜೆ ಬೀಸಿದ ಭಾರೀ ಬಿರುಗಾಳಿ ಹಾಗೂ ಮಳೆಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿದ್ದ ಪೇ ಅಂಡ್ ಪಾರ್ಕಿಂಗ್ನ ತಾತ್ಕಾಲಿಕ ಶೆಡ್ ಧರೆಗುರುಳಿದ ಪರಿಣಾಮ ನೂರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಶೆಡ್ ಅಡಿಯಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ.
ಬಿರುಗಾಳಿಯ ತೀವ್ರತೆಗೆ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಶೆಡ್ ಸಂಪೂರ್ಣ ಕುಸಿದಿದ್ದು, ಅದರ ಅಡಿಯಲ್ಲಿ ನಿಲ್ಲಿಸಿದ್ದ ಹಲವು ಬೈಕ್ಗಳು ಜಖಂಗೊಂಡಿವೆ. ಘಟನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಘಟನೆ ನಡೆದ ವೇಳೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಶೆಡ್ ಕುಸಿದ ತಕ್ಷಣ ಸ್ಥಳೀಯರು ಹಾಗೂ ವಾಹನ ಮಾಲೀಕರು ರಕ್ಷಣಾ ಕಾರ್ಯದಲ್ಲಿ ತೊಡಗಿ, ವಾಹನಗಳನ್ನು ಹೊರತೆಗೆದರು.
ಇದೇ ವೇಳೆ ಕೊರಟಗೆರೆ ತಾಲೂಕಿನ ವಿವಿಧ ಭಾಗಗಳಲ್ಲಿಯೂ ಗಾಳಿ-ಮಳೆಯಿಂದ ಹಾನಿ ಸಂಭವಿಸಿರುವ ವರದಿಗಳು ಕೇಳಿಬರುತ್ತಿವೆ.

ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಿಯ ಸಂಪೂರ್ಣ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.
ಬಿರುಗಾಳಿ ಹಾಗೂ ಮಳೆಯ ಅಬ್ಬರದಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
-ಶ್ರೀನಿವಾಸ್ ಕೊರಟಗೆರೆ.
