ಬೆಂಗಳೂರು, ಜೂ.23: ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ಯೋಜನೆಗೆ ಚಾಲನೆ ನೀಡಿದೆ. ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಸೂಚನೆ ಮೇರೆಗೆ, ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೆ ಅಧಿಕೃತ ಸ್ಥಳೀಯ ಮಾರ್ಗದರ್ಶಕರನ್ನು (ಗೈಡ್ಗಳನ್ನು) ಸುಲಭವಾಗಿ ಸಂಪರ್ಕಿಸುವ ವ್ಯವಸ್ಥೆ ಕಲ್ಪಿಸುವ ‘ನಮ್ಮ ಗೈಡ್’ (Namma Guide) ಎಂಬ ಅತ್ಯಾಧುನಿಕ ಡಿಜಿಟಲ್ ವೇದಿಕೆಯನ್ನು ರೂಪಿಸಲು ಮುಂದಾಗಿದೆ.
ಈ ಯೋಜನೆಯಡಿ ಪ್ರತ್ಯೇಕ ವೆಬ್ಸೈಟ್ ಮತ್ತು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಪ್ರವಾಸಿಗರು ರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮುನ್ನವೇ ತಮ್ಮ ಅಗತ್ಯಕ್ಕೆ ತಕ್ಕ ಅಧಿಕೃತ ಗೈಡ್ಗಳನ್ನು ಆನ್ಲೈನ್ ಮೂಲಕ ಕಾಯ್ದಿರಿಸಬಹುದಾಗಿದೆ. ಇದರಿಂದ ಪ್ರವಾಸಿಗರಿಗೆ ಸ್ಥಳಗಳ ಇತಿಹಾಸ, ಸಂಸ್ಕೃತಿ ಹಾಗೂ ವಿಶೇಷತೆಗಳ ಬಗ್ಗೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿ ದೊರೆಯಲಿದೆ.
ವಿದೇಶಗಳಲ್ಲಿ ಯಶಸ್ವಿಯಾಗಿ ಜಾರಿಯಲ್ಲಿರುವ ಡಿಜಿಟಲ್ ಗೈಡ್ ವ್ಯವಸ್ಥೆಯನ್ನು ಮಾದರಿಯಾಗಿ ತೆಗೆದುಕೊಂಡು ಈ ಯೋಜನೆಯನ್ನು ರೂಪಿಸಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಈಗಾಗಲೇ ನೋಂದಣಿಯಾಗಿರುವ ನೂರಾರು ಸ್ಥಳೀಯ ಗೈಡ್ಗಳಿಗೆ ಈ ವೇದಿಕೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಜೊತೆಗೆ, ಪ್ರವಾಸಿಗರೊಂದಿಗೆ ನೇರ ಸಂಪರ್ಕ ಸಾಧಿಸಲು ಸಹಕಾರಿಯಾಗಲಿದೆ.
ಇದರೊಂದಿಗೆ ಪ್ರವಾಸಿ ತಾಣಗಳ ಸ್ವಚ್ಛತೆ ಕಾಪಾಡುವುದು, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಪ್ರವಾಸಿಗರಿಗೆ ಗುಣಮಟ್ಟದ ಸೇವೆ ಒದಗಿಸುವ ಕಾರ್ಯಗಳಲ್ಲಿ ಗೈಡ್ಗಳ ಸಕ್ರಿಯ ಭಾಗವಹಿಸುವಿಕೆಗೆ ಉತ್ತೇಜನ ಸಿಗಲಿದೆ ಎಂದು ಇಲಾಖೆ ತಿಳಿಸಿದೆ.
‘ನಮ್ಮ ಗೈಡ್’ ಯೋಜನೆಯನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲು ರಾಜ್ಯದ ಪ್ರಮುಖ ಸ್ಟಾರ್ಟ್ಅಪ್ಗಳು ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಐಟಿ ಸಂಸ್ಥೆಗಳಿಂದ ವೆಬ್ಸೈಟ್ ಮತ್ತು ಆ್ಯಪ್ ಅಭಿವೃದ್ಧಿಗೆ ಆಸಕ್ತಿ ಆಹ್ವಾನಿಸುವ ಪ್ರಕ್ರಿಯೆ ಆರಂಭಿಸಲಾಗುತ್ತಿದೆ.
ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ, ಪ್ರವಾಸಿಗರಿಗೆ ವಿಶ್ವದರ್ಜೆಯ ಡಿಜಿಟಲ್ ಅನುಭವ ಒದಗಿಸುವ ನಿಟ್ಟಿನಲ್ಲಿ ‘ನಮ್ಮ ಗೈಡ್’ ಯೋಜನೆ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
