ಗಾಂಧಿನಗರ, ಜೂನ್ 27: ದೇಶದ ಮೊದಲ ಸಹಕಾರ ಆಧಾರಿತ, ಚಾಲಕರೇ ಮಾಲೀಕರಾಗಿರುವ ರೈಡ್-ಹೇಲಿಂಗ್ ಸೇವೆ **’ಭಾರತ್ ಟ್ಯಾಕ್ಸಿ’**ಗೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಗುಜರಾತ್ನ ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ ಶನಿವಾರ ಚಾಲನೆ ನೀಡಿದರು.
‘ಸಾರಥಿಯೇ ಮಾಲೀಕ‘ (Saarthi Hi Maalik) ಎಂಬ ತತ್ವದಡಿ ರೂಪುಗೊಂಡಿರುವ ಈ ಸೇವೆಯಲ್ಲಿ ಚಾಲಕರೇ ಸೇವೆಯ ಮಾಲೀಕರಾಗಿದ್ದು, ಯಾವುದೇ ಕಮಿಷನ್ ಕಡಿತವಿಲ್ಲದೆ ಸಂಪೂರ್ಣ ಆದಾಯವನ್ನು ಪಡೆಯಲಿದ್ದಾರೆ. ಜೊತೆಗೆ ಚಾಲಕರಿಗೆ ವಿಮೆ, ಸಾಲ ಹಾಗೂ ಪಿಂಚಣಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನೂ ಒದಗಿಸಲಾಗುತ್ತದೆ.
ಆರಂಭಿಕ ಹಂತದಲ್ಲಿ ಅಹಮದಾಬಾದ್, ಸೂರತ್, ವಡೋದರಾ, ರಾಜ್ಕೋಟ್ ಸೇರಿದಂತೆ ಗುಜರಾತ್ನ 14 ಪ್ರಮುಖ ನಗರಗಳಲ್ಲಿ ಈ ಸೇವೆ ಆರಂಭಗೊಂಡಿದ್ದು, ಮುಂದಿನ ಒಂದು ತಿಂಗಳೊಳಗೆ ರಾಜ್ಯದಾದ್ಯಂತ ವಿಸ್ತರಿಸುವ ಗುರಿ ಹೊಂದಲಾಗಿದೆ.
ಡಿಸೆಂಬರ್ 2025ರಲ್ಲಿ ಆರಂಭಗೊಂಡ ಪ್ರಾಯೋಗಿಕ ಸೇವೆಗೆ ಈಗಾಗಲೇ 1.5 ಲಕ್ಷಕ್ಕೂ ಹೆಚ್ಚು ಚಾಲಕರು ಮತ್ತು 7 ಲಕ್ಷ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಪ್ರತಿದಿನ ಸರಾಸರಿ 3,500ಕ್ಕೂ ಹೆಚ್ಚು ಪ್ರಯಾಣಗಳು ಈ ವೇದಿಕೆಯ ಮೂಲಕ ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಗೆ ಅಮೂಲ್, ಐಎಫ್ಎಫ್ಸಿಒ (IFFCO), ನಬಾರ್ಡ್ (NABARD), ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (NCDC), ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (NDDB), ನಾಫೆಡ್ (NAFED), ಕೃಷಿಭ್ಕೊ (KRIBHCO) ಹಾಗೂ ಎನ್ಸಿಇಎಲ್ (NCEL) ಸೇರಿದಂತೆ ಎಂಟು ಪ್ರಮುಖ ಸಹಕಾರ ಸಂಸ್ಥೆಗಳು ಬೆಂಬಲ ನೀಡುತ್ತಿವೆ.
‘ಸಹಕಾರದಿಂದ ಸಮೃದ್ಧಿ‘ ಎಂಬ ಪರಿಕಲ್ಪನೆಯನ್ನು ಬಲಪಡಿಸುವ ಉದ್ದೇಶದಿಂದ ರೂಪುಗೊಂಡಿರುವ ಈ ಯೋಜನೆಯು ಸಹಕಾರ ಕ್ಷೇತ್ರದ ಮೂಲಕ ಉದ್ಯೋಗ, ಆದಾಯ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
