ಶ್ಲೋಕ – 08
ದುಃಖಮಿತ್ಯೇವ ಯತ್ ಕರ್ಮ ಕಾಯಕ್ಲೇಶಭಯಾತ್ ತ್ಯಜೇತ್ ।
ಸ ಕೃತ್ವಾ ರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಭೇತ್ ॥೮॥
ದುಃಖಮ್ ಇತಿ ಏವ ಯತ್ ಕರ್ಮ ಕಾಯ ಕ್ಲೇಶ ಭಯಾತ್ ತ್ಯಜೇತ್ ।
ಸ ಕೃತ್ವಾ ರಾಜಸಮ್ ತ್ಯಾಗಮ್ ನ ಏವ ತ್ಯಾಗ ಫಲಮ್ ಲಭೇತ್ – ಮಾಡುವುದಕ್ಕೆ ಮೈಬಗ್ಗದೆ, ಬಗೆಯೊಗ್ಗದೆ, ಕಷ್ಟವಾಗುತ್ತದೆ ಎಂದು ಮಾಡದೆ ಇರುವುದು ರಾಜಸ ತ್ಯಾಗ. ಇಂಥ ತ್ಯಾಗ ಮಾಡಿಯೂ ತ್ಯಾಗದ ಫಲ ದೊರೆಯದು.
ನಮಗೆ ನಮ್ಮ ನಿಯತಕರ್ಮ ಮಾಡಬೇಕು ಎನ್ನುವುದು ಗೊತ್ತಿದ್ದೂ, ಮನಸ್ಸಿಗೆ ದೇಹಕ್ಕೆ ನೋವಾಗುತ್ತದೆ ಎನ್ನುವ ಕಾರಣಕ್ಕಾಗಿ ಕರ್ಮವನ್ನು ಮಾಡದೆ ಬಿಡುವುದು ರಾಜಸ ತ್ಯಾಗ ಎನಿಸುತ್ತದೆ. ಉದಾಹರಣೆಗೆ ಯಾವುದೋ ದೂರದರ್ಶನದ ದಾರಾವಾಹಿಯನ್ನು ನೋಡಬೇಕು ಎನ್ನುವ ಮನಸ್ಸಿನ ಉತ್ಕಟ ಬಯಕೆಯಿಂದ ಕರ್ಮವನ್ನು ಕೈಬಿಡುವುದು, ಚಳಿಯಾಗುತ್ತದೆ ಎಂದು ಸಂಧ್ಯಾವಂದನೆ ಮಾಡದೇ ಇರುವುದು, ಇತ್ಯಾದಿ ರಾಜಸ ತ್ಯಾಗ. ಇಂಥಹ ರಾಜಸ ತ್ಯಾಗ ಮಾಡಿದರೆ ನಿಜವಾದ ತ್ಯಾಗದ ಫಲ ಸಿಗದು.
