ಕೆ.ಆರ್.ಪೇಟೆ: ಆಧುನಿಕ ಜಗತ್ತಿನಲ್ಲಿ ಯುವಕರಿಗೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಹಾಗೂ ದೈಹಿಕ,ಮಾನಸಿಕ ನೆಮ್ಮದಿಗೆ ಕ್ರೀಡೆ ಅವಶ್ಯಕ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.
ತಾಲ್ಲೂಕಿನ ಶೀಳನೆರೆ ಗ್ರಾಮದ ಶ್ರೀ ಸ್ನೇಹಜೀವಿ ಗೆಳೆಯ ಬಳಗದ ವತಿಯಿಂದ ನಾಡ ಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ಗ್ರಾಮದ ಕಾಲೇಜು ಮೈದಾನದಲ್ಲಿ ಜಿಲ್ಲಾ ಮಟ್ಟದ ಶೀಳನೆರೆ ಪ್ರೀಮಿಯರ್ ಲೀಗ್ (ಎಸ್.ಪಿ.ಎಲ್)-1 ಟೆನ್ನಿಸ್ ಬಾಲ್ ಕ್ರಿಕೆಟ್ ಕ್ರೀಡಾಕೂಟಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.ಯುವಕರಲ್ಲಿ ಕ್ರೀಡಾ ಮನೋಭಾವ ಹೆಚ್ಚಬೇಕು. ದೇಹದ ಸದೃಢತೆಗೆ ಕ್ರೀಡೆ ಅತ್ಯಂತ ಸಹಕಾರಿ. ಇಂದಿನ ಡಿಜಿಟಲ್ ಯುಗದಲ್ಲಿ ಯುವಕರು ಮೊಬೈಲ್ ಹಾಗೂ ಮಾದಕ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದ ದೂರವಿದ್ದು ಮೈದಾನಕ್ಕೆ ಬಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಶೀಳನೆರೆ ಗ್ರಾಮ ಒಂದು ಇತಿಹಾಸ ಉಳ್ಳ ಗ್ರಾಮ. ಇಂತಹ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ. ಗ್ರಾಮದ ಯುವಕರು ಕ್ರೀಡೆಯಲ್ಲಿ ಸಾಧನೆ ಮಾಡಿ ಗ್ರಾಮಕ್ಕೆ, ತಾಲ್ಲೂಕಿಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.

*ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕ ಎಸ್.ಎಲ್. ಮೋಹನ್ ಮಾತನಾಡಿ* ಕ್ರೀಡೆ ಜಾತಿ, ಮತ, ಭೇದ ಇಲ್ಲದ ಒಂದು ಉತ್ತಮ ವೇದಿಕೆ. ಕ್ರೀಡೆಯಲ್ಲಿ ಎಲ್ಲರೂ ಒಂದೇ. ಕ್ರೀಡೆಯಿಂದ ಸಹೋದರತೆ, ಸ್ನೇಹ ಭಾವನೆ ಬೆಳೆಯುತ್ತದೆ. ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟಗಳಿಂದ ಅನೇಕ ಪ್ರತಿಭೆಗಳು ಹೊರಬರುತ್ತವೆ. ಆದರೆ ಯುವಕರು ಕ್ರಿಕೆಟ್ ಕ್ರೀಡೆ ಆಡಲಿ, ಆದರೆ ಕ್ರೀಡೆ ಹೆಸರಿನಲ್ಲಿ ಜೂಜಿನ ಬಲೆಗೆ ಸಿಲುಕದಿರಿ. ಇತ್ತೀಚೆಗೆ ಆನ್ಲೈನ್ ಬೆಟ್ಟಿಂಗ್, ಐಪಿಎಲ್ ಬೆಟ್ಟಿಂಗ್ನಿಂದ ಯುವಕರು ಹಣದ ಜೊತೆಗೆ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ.ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ಮಾತ್ರ ಆಡಬೇಕು. ಎಸ್.ಪಿ.ಎಲ್ ಟೂರ್ನಮೆಂಟ್ ಮುಂದಿನ ವರ್ಷಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ನಡೆಯಲಿ, ನಮ್ಮ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರಕಾಶ್, ಯುವ ಮುಖಂಡರಾದ ಅಶ್ವಥ್, ಮಾಜಿ ಪ್ರಕಾಶ್, ಸರ್ವೇ ಮಂಜು, ಕ್ರೀಡಾ ಆಯೋಜಕರಾದ ಅಜಯ್, ಸದಾನಂದ, ಹುಣಸನಹಳ್ಳಿ ರಮೇಶ್, ಎಸ್ಪಿಎಲ್ ಕ್ರೀಡಾ ಯುವಕರು ಸೇರಿದಂತೆ ಕ್ರೀಡಾಪಟುಗಳಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ*
