ತುಮಕೂರು- ಕೆಂಪೇಗೌಡರನ್ನು ಇಂದು ಕೇವಲ ಬೆಂಗಳೂರಿಗೆ ಸೀಮಿತಗೊಳಿಸಲಾಗಿದೆ. ಆದರೆ ಅವರು ಅಂದು ನೀಡಿದ ಯೋಜನೆಗಳನ್ನು ಹೇಗೆ ನಮ್ಮ ಜಿಲ್ಲೆಯ ಬೆಳವಣಿಗೆಗೆ ಬಳಕೆ ಮಾಡಬಹುದು ಎಂಬುದನ್ನು ಇಂದಿನ ಯುವಜನರು ಚಿಂತಿಸಬೇಕಿದೆ. ಅವರು ದೂರದೃಷ್ಟಿಯ ಯೋಜನೆಗಳು, ಅವುಗಳ ಉಪಯೋಗ ಕುರಿತು ಪುಸ್ತಕ ಮುದ್ರಿಸಿ ಎಲ್ಲರಿಗೂ ತಲುಪುವಂತೆ ಮಾಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.
ಇಂದು ಸಾಂಕೇತಿಕವಾಗಿ ಜಿಲ್ಲಾಡಳಿತ ಜಯಂತಿಯನ್ನು ಆಚರಿಸುತ್ತಿದ್ದು, ಕೆಲವೇ ದಿನಗಳಲ್ಲಿ ಬಿಜಿಎಸ್ ವೃತ್ತದಲ್ಲಿ ಅವರ ನಾಮಫಲಕ ಆನಾವರಣ ಮಾಡುವ ಮೂಲಕ ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಜಿಲ್ಲಾ ಕಸಾಪ ಹಾಗೂ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ ಮಾತನಾಡಿ, ಕೆಂಪೇಗೌಡ ಅವರು ಒಂದು ಸಮುದಾಯಕ್ಕೆ ಸಿಮೀತರಾದವರಲ್ಲ, ಅವರು ವಿಶ್ವಮಾನವರು. ಎಲ್ಲ ವರ್ಗದ ಜನರು ಅವರ ಕುಲ ಕಸುಬಿನಿಂದ ಬಂದ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಒದಗಿಸಿ, ಜನರ ಅರ್ಥಿಕ, ಸಾಮಾಜಿಕ ಬೆಳವಣಿಗೆಗೆ ಕಾರಣರಾಗಿದ್ದರು. ನೂರಾರು ಕೆರೆ ಕಟ್ಟೆಗಳನ್ನು ನಿರ್ಮಿಸಿ, ಜನರ ಬದುಕಿಗೆ ಆಸರೆ ಒದಗಿಸಿದ್ದರು. ಇಂದಿಗೂ ಬೆಂಗಳೂರು ವಿಶ್ವದಲ್ಲಿಯೇ ಗಮನ ಸೆಳೆಯುವ ನಗರವಾಗಿದ್ದರೆ ಅದಕ್ಕೆ ಕೆಂಪೇಗೌಡರ ದೂರದೃಷ್ಠಿಯೇ ಕಾರಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಜನಪರವಾಗಿ ಬೆಂಗಳೂರಿನ ಅಭಿವೃದ್ಧಿಗೆ ದುಡಿದ ಕೆಂಪೇಗೌಡರ ಜಯಂತಿಯನ್ನು ಎಲ್ಲರೂ ಆಚರಿಸುವಂತಾಗಬೇಕು. 16ನೇ ಶತಮಾನದ ನಾಡಪ್ರಭು ಕೆಂಪೇಗೌಡರ ಆಡಳಿತ ಇಂದಿಗೂ ಮಾದರಿಯಾಗಿದೆ. ಸರ್ಕಾರ ಅವರ ದೂರದೃಷ್ಟಿಯ ಯೋಜನೆಗಳನ್ನು ತಮ್ಮ ಅಡಳಿತದಲ್ಲಿಯೂ ಅಳವಡಿಸಿಕೊಳ್ಳುವಂತಾಗಬೇಕು. ಅವರ ಆರ್ದಶಗಳನ್ನು ನಾವು ಪಾಲಿಸಬೇಕಿದೆ ಎಂದರು.
ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ ಕು.ಮಿರ್ಜಿ, ನರಸೇಗೌಡ, ಸಿದ್ದರಾಜೇಗೌಡ, ಸಿದ್ದಲಿಂಗೇಗೌಡ, ಅಶ್ವಥಗೌಡ, ಡಿಡಿಪಿಐ ರಾಧಾ, ರೇವಣ್ಣ, ರಾಮಮೂರ್ತಿ ಗೌಡ ಮತ್ತಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
