ತುಮಕೂರು: ಜಿಲ್ಲೆಯ ವಕೀಲರ ಸಂಘಗಳ ಮತ್ತು ವಕೀಲ ಬಂಧುಗಳ ಸೇವೆಗೆ ನಾನು ಸದಾ ಬದ್ಧ,ವಕೀಲರ ಸಮಸ್ಯೆಗಳು ಏನೇ ಇದ್ದರೂ ನನಗೆ ದೂರವಾಣಿ ಮುಖಾಂತರ ತಿಳಿಸಿದರೆ ಸಾಕು,ನಾನು ಅವರ ಕಷ್ಟ ಅಥವಾ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆ,ವಕೀಲರು ಕಕ್ಷಿದಾರರ ಕಷ್ಟಗಳನ್ನು ತನ್ನ ಕಷ್ಟಗಳೆಂದು ತಿಳಿದು ನ್ಯಾಯಾಲಯದ ಒಳಗೆ ಮತ್ತು ಹೊರಗೆ ಸದಾ ಒತ್ತಡಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ.
ವಕೀಲರ ಆರೋಗ್ಯ ಮುಖ್ಯ ಅವರ ಆರೋಗ್ಯ ವಿಮೆ ಮಾಡಿಸಲು ಕಾರ್ಯಪ್ರವೃತ್ತನಾಗುತ್ತೇನೆ,ಜಿಲ್ಲೆಯ ಎಲ್ಲ ತಾಲ್ಲೋಕುಗಳಲ್ಲಿ ಉತ್ತಮ ನೂತನ ವಕೀಲರ ಸಂಘ ಸ್ಥಾಪನೆಯಾಗಬೇಕು, ನ್ಯಾಯಾಲಯಗಳ ಸಂಕೀರ್ಣವಾಗಬೇಕು,ನ್ಯಾಯಾಲಯಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ರಾಜ್ಯ ವಕೀಲರ ಪರಿಷತ್ ನ ಎಲ್ಲ ಸದಸ್ಯರೊಂದಿಗೆ ಸೇರಿ ತುಮಕೂರು ಜಿಲ್ಲೆಯ ವಕೀಲರ ಅಭ್ಯುದಯಕ್ಕಾಗಿ ದುಡಿಯುತ್ತೇನೆ ಎಂದು ರಾಜ್ಯ ವಕೀಲರ ಪರಿಷತ್ ಗೆ ಸ್ಪರ್ಧಿಸಿ 2ನೇ ಬಾರಿ ಆಯ್ಕೆಯಾದ ಸದಸ್ಯ ಎಂ.ಎನ್.ಮಧುಸೂಧನ್ ರವರು ತಿಳಿಸಿದರು.

ಅವರು ಇಂದು ತುಮಕೂರು ಜಿಲ್ಲಾ ವಕೀಲರ ಸಂಘ ಏರ್ಪಡಿಸಿದ್ದ ಸನ್ಮಾನ ಸಮಾರಂಭಕ್ಕೆ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪ್ರತಿ ತಾಲ್ಲೋಕಿನಲ್ಲಿ ಎರಡು ತಿಂಗಳಿಗೊಮ್ಮೆ ಕಾನೂನು ಪರಿಣತ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಕಾನೂನಿಗೆ ಸಂಬಂಧಿಸಿದ ತರಗತಿಗಳನ್ನು ನಡೆಸಲಾಗುವುದು,ಕಾನೂನು ದಿನದಿಂದ ದಿನಕ್ಕೆ ಅಪ್ ಡೇಟ್ ಆಗುತ್ತಿದೆ ನೂತನವಾಗಿ ಬರುತ್ತಿರುವ ಕಿರಿಯ ವಕೀಲರು ಹೊಸ ಹೊಸ ತಂತ್ರಜ್ಞಾನ,ಮಾಹಿತಿಗಳನ್ನು ಪಡೆಯಬೇಕು,ವಕೀಲರ ಸಂಘದಲ್ಲಿ ಶುದ್ಧ ಕುಡಿಯುವ ನೀರು,ಶೌಚಾಲಯ,ಗ್ರಂಥಾಲಯ,ಇತ್ಯಾದಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರಾಜ್ಯ ವಕೀಲರ ಪರಿಷತ್ ಸದಾ ಸಿದ್ಧವಿದೆ,ನಾನು ತಿಂಗಳಿಗೊಮ್ಮೆ ಎಲ್ಲ ವಕೀಲರ ಸಂಘಗಳಿಗೆ ಭೇಟಿ ನೀಡಲು ಕಾರ್ಯಕ್ರಮ ಹಾಕಿಕೊಳ್ಳುವೆ,ಸದಾ ಒತ್ತಡದಲ್ಲಿರುವ ವಕೀಲರು ನಾಟಕ,ಹಾಡು,ಕ್ರೀಡೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕೆಂದು ಎಂ.ಎನ್.ಮಧುಸೂಧನ್ ರವರು ಕರೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರು ಮಾತನಾಡುತ್ತಾ ಎಂ.ಎನ್.ಮಧುಸೂಧನ್ ರವರು ಎರಡನೇ ಬಾರಿಗೆ ರಾಜ್ಯ ವಕೀಲರ ಪರಿಷತ್ ಗೆ ಸದಸ್ಯರಾಗಿ ಆಯ್ಕೆಯಾಗಿರುವುದು ನಮಗೆಲ್ಲಾ ಸಂತೋಷ ತಂದಿದೆ,ಇವರು ನಮ್ಮ ಜಿಲ್ಲೆಯ ಮನೆಮಗ,ನಮ್ಮ ಸಹೋದರರಿದ್ದಂತೆ,ನಮ್ಮ ಜಿಲ್ಲೆಯ ತುರುವೇಕೆರೆ ತಾಲ್ಲೋಕಿನವರಾದ ಮಧುಸೂಧನ್ ರವರು ಜಿಲ್ಲೆಯ ವಕೀಲರೊಂದಿಗೆ ಸಮಾನ ಮನಸ್ಕರಾಗಿ ದುಡಿಯುತ್ತಿದ್ದಾರೆ,ವಕೀಲರ ಎಲ್ಲ ಕಷ್ಟ ಸುಖಗಳಿಗೆ ಸದಾ ಸ್ಪಂದಿಸುವ ಗುಣ ಹೊಂದಿದ್ದಾರೆ,ವಕೀಲರ ಮರಣನಿಧಿಯನ್ನು 25ಲಕ್ಷಕ್ಕೆ ಏರಿಸಲು ಕ್ರಮಕೈಗೊಳ್ಳಬೇಕು,ವಕೀಲರ ಆರೋಗ್ಯ ವಿಮೆ ಕೊಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿಮಹೇಶ್,ಹಾಲನೂರು ಅನಂತಕುಮಾರ್,ಖಜಾಂಚಿ ಶ್ರೀಮತಿ ಸಿಂಧು,ಶ್ರೀನಿವಾಸಮೂರ್ತಿ, ಗೋವಿಂದರಾಜು, ಬಸವರಾಜು,ರಾಜೇಂದ್ರ,ಶೇಖರ್ ನವೀನ್,ಶ್ರೀನಿವಾಸ್,ಸೇರಿದಂತೆ ನೂರಾರು ವಕೀಲರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
