ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಓಹೋ ಹೀಗೂ ಉಂಟೇ..!
ನಮ್ಮ “ಪ್ರಾಜೆಕ್ಟ್ ಮಯೂರ”ನಡೆಯುತ್ತಿದ್ದ ಸಮಯದಲ್ಲಿ ನನ್ನ ಸ್ನೇಹಿತರಾದ ಭಾಗಮನೆ ಪ್ರಮೋದ್ಡರವರು ಅವರ ತೋಟದಲ್ಲಿದ್ದ ನವಿಲುಗಳ ಬಗ್ಗೆ ಹೇಳಿದ್ದರು. ಇದನ್ನು ತೇಜಸ್ವಿಯವರಲ್ಲಿ ಪ್ರಸ್ತಾಪಿಸಿದೆ. “ಸರಿ ನಡೀ ಹೋಗಿ ಬರೋಣ” ಎಂದರು. ಸ್ಕೂಟರಿನಲ್ಲಿ ಬೆಟ್ಟಗೆರೆಗೆ ಹೊರಟೆವು. ದಾರಿಯಲ್ಲಿ ಪೊದೆಗಳ ಮರೆಯಲ್ಲಿದ್ದ ವೀರಗಲ್ಲುಗಳ ಬಗ್ಗೆ ತಿಳಿಸಿದೆ. “ಹೌದೆನಯ್ಯಾ ?ಎಲ್ಲಿ ತೋರಿಸು” ಎಂದರು.
ಕಾಡು ನುಗ್ಗಿದೆವು. ನನ್ನ ಗ್ರಹಚಾರಕ್ಕೆ ಏನಾಯ್ತು ನೋಡಿ, ಅತ್ತಿತ್ತ ನೋಡಿದರೆ ಕಲ್ಲುಗಳೇ ಕಾಣ್ತಾ ಇಲ್ಲ! ಸರಿಯಾದ ಸ್ಥಳಕ್ಕೆ ಕರೆತಂದೆನೋ, ದಾರಿತಪ್ಪಿದೆವೋ ಎಂದು ನನಗೆ ದಿಗಿಲಾಯಿತು. ಎಲ್ಲಿ ಇವರ ಸಮಯ ಹಾಳು ಮಾಡಿ ಬೈಗುಳ ತಿನ್ನಬೇಕೋ ಎಂದು ನನ್ನ ಕನ್ಫ್ಯೂಷನ್ ಹೇಳಿಕೊಂಡೆ. ನನಗಿಂತ ದೃಢತೆಯಿಂದ “ಇರಯ್ಯಾ ನೂರಾರು ವರ್ಷಗಳಿಂದ ಇದ್ದುದು ಈಗ ಎಲ್ಲಿಗೂ ಹೋಗಲ್ಲ. ಮತ್ಯಾವಗಾದ್ರೂ ನೋಡೋಣ” ಎನ್ನುತ್ತಿದ್ದಂತೆ ನಾಲ್ಕು ವೀರಗಲ್ಲುಗಳು ಮುಳ್ಳುಕಂಟಿಗಳ ಮಧ್ಯದಲ್ಲಿ ಗೋಚರಿಸಿದವು.. ಅವುಗಳಲ್ಲಿ ಬರಹ, ವಿನ್ಯಾಸಗಳನ್ನು ವಿವರಿಸಿ ಹೇಳಿದರು. ಮೂಡಿಗೆರೆ ಫಾರೆಸ್ಟ್ ಆಫೀಸಿನ ಎದುರಿನ ವೀರಗಲ್ಲುಗಳನ್ನು ಪ್ರಸ್ತಾಪಿಸಿ ರಸ್ತೆ ಅಗಲದ ನೆಪದಲ್ಲಿ ಯಾರದಾದರೂ ಮನೆಗೆ ಬಟ್ಟೆ ಒಗೆಯುವ ಚಪ್ಪಡಿಯಾಗುವ ಸಾಧ್ಯತೆ ಕುರಿತು ಗುಮಾನಿ ವ್ಯಕ್ತಪಡಿಸಿದ್ದರು.
ಹೀಗೇ ಒಮ್ಮೆ ಅಲೆಮಾರಿ ಪ್ರವೃತ್ತಿಯ ತೇಜಸ್ವಿ ಕಡೂರಿನ ಕಡೆಯಿಂದ ಮೂಡಿಗೆರೆಗೆ ವಾಪಾಸ್ಸಾಗುತ್ತಿದ್ದಾಗ ದಾರಿಯಲ್ಲಿನ ಪೋಲೀಸ್ ಠಾಣೆಯ ಆವರಣದಲ್ಲಿದ್ದ ಪುರಾತನ ಶಾಸನ, ಶಿಲಾಫಲಕ ಮತ್ತು ವೀರಗಲ್ಲುಗಳನ್ನು ಮನುಷ್ಯ ಸಹಜ ಕುತೂಹಲ ಮತ್ತು ಆಸಕ್ತಿಯಿಂದ ಫೋಟೋ ತೆಗೆಯಲು ಹೋದರು. ಠಾಣೆಯೊಳಗಿಂದ ಹೊರಬಂದ ಸಿಬ್ಬಂಧಿ ಅನುಮತಿಯಿಲ್ಲದೇ ಫೋಟೋ ತೆಗೆಯದಂತೆ ತಾಕೀತು ಮಾಡಿದರು.
ಓಹೋ ಹೀಗೂ ಉಂಟೇ ಎಂದುಕೊಂಡು ಸರಿ, ಅನುಮತಿ ಕೊಡಿ ಎಂದರಂತೆ. ಇಲ್ಲ ಇಲ್ಲ ನಮ್ಮ ಸಾಹೇಬರನ್ನು ಕೇಳಬೇಕು. ಅವರು ಒಪ್ಪಿಗೆ ನೀಡಿದರೆ ಮಾತ್ರ ಫೋಟೋ ತೆಗೆದುಕೊಳ್ಳುವಿರಂತೆ ಎಂದರಂತೆ. ಅನುಮತಿ ನೀಡಲು ನಿಮಗೆ ಅಧಿಕಾರವಿಲ್ಲದಿದ್ದರೆ, ನಿರ್ಬಂಧಿಸಲೂ ನಿಮಗೆ ಅವಕಾಶವಿಲ್ಲ ಎಂದು ತಮಗೆ ಬೇಕಿದ್ದ ಫೋಟೋ ತೆಗೆದುಕೊಂಡರಂತೆ.

ವಿವೇಚನೆ ಇಲ್ಲದ ಅರ್ಥಹೀನ ನೀತಿನಿಯಮಗಳು ಅನೇಕ ಬಾರಿ ಇರುಸು ಮುರುಸಿನೊಂದಿಗೆ ಅಪಹಾಸ್ಯಕ್ಕೂ ಕಾರಣವಾಗುತ್ತವೆ. ದೇವಾಲಯಗಳಲ್ಲಿ ಕಾರಣವೇ ಇಲ್ಲದೇ ಷರಟು ತೆಗೆಸುವುದು, ಸಾರ್ವಜನಿಕ ಸ್ಥಳಗಳ ಛಾಯಾಗ್ರಹಣ ನಿರ್ಬಂಧ ಮುಂತಾದುವು ಇತರೆ ಉದಾಹರಣೆಗಳು.
ಕಲಾಕುಟೀರದ ಉದ್ಘಾಟನೆಯ ದಿನದಂದು ನಡೆದ ಕಲಾ ಪ್ರದರ್ಶನದಲ್ಲಿ ಭಾಗಹಿಸಿದ್ದ ಕಲಾವಿದರೆಲ್ಲರಿಗೂ ಸ್ಫೂರ್ತಿಯ ಮಾತನಾಡಿ ಬೆನ್ನು ತಟ್ಟಿದ್ದರು. ನಾನು ಪ್ರಿಂಟ್ ಹಾಕಿಸಿ, ಫ್ರೇಮ್ ಮಾಡಿಸಿ, ಪ್ರದರ್ಶಿಸಿದ್ದ ಫೋಟೋಗಳನ್ನು ಜೇಬಲ್ಲಿ ಕೈ ಇರಿಸಿಕೊಂಡು ನೋಡಿದ ನಂತರ ನನ್ನೆಡೆಗೆ ಸಿಟ್ಟಿಗೆದ್ದಿದ್ದಾರೋ ಎನ್ನುವಂತೆ ತಿರುಗಿ ನೋಡಿ ಮತ್ತೊಮ್ಮೆ ಚಿತ್ರದೆಡೆಗೆ ನೋಡಿ “ಹಲ್ಕಾ, ಇದನ್ನೆಲ್ಲಾ ಯಾವಾಗ ಕೂತುಕೊಂಡು ಕೆತ್ತಿದೆ? ನಾನು ನಿನ್ನ ಯಡವಟ್ಟ್ಟನ್ನೆಲ್ಲಾ ನೋಡಿ ಏನೋ ಅಂದ್ಕ್ಕೊಂಡಿದ್ದೆ. ಮನೆ ಹತ್ರ ಬಾ ಕಾಲ್ ಮುರಿಸ್ಕೊತೀಯ.” ಎಂದು ಅಲ್ಲಿ ಸೇರಿದ್ದ ನೂರಕ್ಕೂ ಹೆಚ್ಚು ಜನರ ನಡುವೆ ಗಟ್ಟಿಯಾಗಿ ಧ್ವನಿಯಲ್ಲಿ ಗದರಿ ಭುಜ ಅದುಮಿದ್ದರು. ಅಂದಿನಿಂದ ಕೆಲ ವಾರಗಳವರೆಗೆ ನಾನು ನೆಲದ ಮೇಲೆ ನಡೆಯುತ್ತಲೇ ಇರಲಿಲ್ಲ. ತೇಜಸ್ವಿಯವರ ಬಳಿ ಹೊಗಳಿಸಿಕೊಳ್ಳುವುದೆಂದರೆ ಸಾಮಾನ್ಯವಾ?
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

