ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಶಕ್ತಿ ದೇವತೆ ಶ್ರೀ ಚಂದಗೋಳಮ್ಮ ದೇವಾಲಯದ ಬಳಿ ಇರುವ ಕಮಲಮ್ಮ ಎಂಬುವರಿಗೆ ಸೇರಿದ ಚಿಲ್ಲರೆ ಅಂಗಡಿಯ ಬೀಗ ಮುರಿದು ರಾತ್ರೋರಾತ್ರಿ ಖದೀಮರು ನಗದು ಹಾಗೂ ದಿನಸಿ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದಾರೆ. ದೇವಸ್ಥಾನದ ಸಮೀಪದಲ್ಲೇ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ದೇವಾಲಯದ ಸಮೀಪ ಹಲವು ವರ್ಷಗಳಿಂದ ಕಮಲಮ್ಮ ಅವರು ಶ್ರೀ ಚಂದಗೋಳಮ್ಮ ಪ್ರಾವಿಷನ್ಸ್ ಹೆಸರಿನಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿದ್ದಾರೆ ಎಂದಿನಂತೆ ಅಂಗಡಿಗೆ ಬೀಗ ಹಾಕಿ ಹೋಗಿದ್ದರು.

ಬಳಿಕ ಮಾತನಾಡಿದ ಅಂಗಡಿ ಮಾಲಕಿ ಕಮಲಮ್ಮ ನನ್ನ ಗಂಡ ತೀರಿಕೊಂಡ ಮೇಲೆ ಈ ಅಂಗಡಿಯೇ ನನ್ನ ಜೀವನಾಧಾರವಾಗಿತ್ತು.ಬೆಳಗ್ಗೆ 6.30ಕ್ಕೆ ಅಂಗಡಿ ತೆರೆಯಲು ಬಂದಾಗ ಶಟರ್ನ ಬೀಗ ಮುರಿದು ಬಿದ್ದಿರುವುದು ಕಂಡುಬಂದಿದೆ. ಗಾಬರಿಗೊಂಡ ಕಮಲಮ್ಮ ಒಳಗೆ ಹೋಗಿ ನೋಡಿದಾಗ ಗಲ್ಲದ ಡ್ರಾಯರ್ ತೆರೆದು ಅದರಲ್ಲಿದ್ದ 5 ಸಾವಿರ ರೂ. ನಗದು ಮಾಯವಾಗಿತ್ತು. ಅಲ್ಲದೆ ಶೆಲ್ಫ್ನಲ್ಲಿದ್ದ ಸಿಗರೇಟ್ ಪ್ಯಾಕೆಟ್ಗಳು, ಗುಟ್ಕಾ, ವಿವಿಧ ಕಂಪನಿಗಳ 5 ಲೀಟರ್ ಅಡುಗೆ ಎಣ್ಣೆ ಪೌಚ್ಗಳು ಸೇರಿದಂತೆ ಸುಮಾರು 10 ಸಾವಿರ ರೂ. ಮೌಲ್ಯದ ದಿನಸಿ ಸಾಮಗ್ರಿಗಳನ್ನು ಕಳ್ಳರು ದೋಚಿರುವುದು ಪತ್ತೆಯಾಗಿದೆ.
ಒಟ್ಟು 15 ಸಾವಿರ ರೂ. ನಷ್ಟವಾಗಿದೆ ಎಂದ ಅವರು ಪೊಲೀಸರು ಕಳ್ಳರನ್ನು ಹಿಡಿದು ನನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ನಾಯಕೊಡಬೇಕೆಂದು ಕಮಲಮ್ಮ ಕಂಬನಿ ಮಿಡಿಯುತ್ತ ಮನವಿ ಮಾಡಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ*
