ರಾಮನಾಥಪುರ, ಜೂನ್ 28: ರಾಮನಾಥಪುರದಲ್ಲಿ ನಡೆಯಲಿರುವ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ನಾಡಪ್ರಭು ಕೆಂಪೇಗೌಡ ವಕ್ಕಲಿಗರ ಸಂಘದ ಪದಾಧಿಕಾರಿಗಳು ಮಾಜಿ ಸಚಿವರು ಹಾಗೂ ಶಾಸಕ ಎ. ಮಂಜು ಅವರಿಗೆ ಆಹ್ವಾನ ನೀಡಿ ಮನವಿ ಸಲ್ಲಿಸಿದರು.
ರಾಮನಾಥಪುರ ಹೋಬಳಿಯ ಹನ್ಯಾಳು ಗ್ರಾಮದಲ್ಲಿರುವ ಶಾಸಕ ಎ. ಮಂಜು ಅವರ ನಿವಾಸಕ್ಕೆ ಭೇಟಿ ನೀಡಿದ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನೀಡಿ, ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿದರು.
ಈ ವೇಳೆ ಮಾತನಾಡಿದ ಶಾಸಕ ಎ. ಮಂಜು, “ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಆಧುನಿಕ ಆಡಳಿತಕ್ಕೆ ಮುನ್ನುಡಿ ಬರೆದ ಯುಗಪುರುಷರು. ಅವರ ದೂರದೃಷ್ಟಿಯ ಆಡಳಿತ, ನ್ಯಾಯಪಾಲನೆ ಹಾಗೂ ಪ್ರಜೆಗಳ ಕಲ್ಯಾಣದ ಪರಿಕಲ್ಪನೆ ಇಂದಿಗೂ ಮಾದರಿಯಾಗಿದೆ. ಪರಿಸರ ಸಂರಕ್ಷಣೆ, ಕೆರೆ-ಕಟ್ಟೆಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ನೀರಾವರಿ, ದೇವಾಲಯಗಳ ಜೀರ್ಣೋದ್ಧಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆ ಅಪಾರವಾಗಿದೆ” ಎಂದು ಹೇಳಿದರು.

ಕೆಂಪೇಗೌಡರ ಆದರ್ಶಗಳು ಇಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿದ್ದು, ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡ ವಕ್ಕಲಿಗರ ಸಂಘದ ಗೌರವಾಧ್ಯಕ್ಷ ಎಂ.ಎಲ್. ಗೋವಿಂದರಾಜು, ಅಧ್ಯಕ್ಷ ಉಪಾರಿಕೆಗೌಡ, ಪ್ರಧಾನ ಕಾರ್ಯದರ್ಶಿ ಬಿ.ಸಿ. ಹೊನ್ನೇಗೌಡ, ಖಜಾಂಚಿ ಬಸವರಾಜು, ಜಯಂತಿ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷ ಎಚ್.ಎಸ್. ಶಂಕರ್, ಸಮನ್ವಯ ಸಮಿತಿ ಸದಸ್ಯ ಆರ್.ಕೆ. ರಾಜೇಗೌಡ, ಜವರೇಗೌಡ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಜಿ.ಸಿ. ಮಂಜೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಕೆ.ಎಂ.ಕುಮಾರಸ್ವಾಮಿ
