ಬೆಂಗಳೂರು, ಜೂನ್ 29, 2026: ಅತ್ಯಂತ ದುಃಖದ ಸನ್ನಿವೇಶದಲ್ಲಿಯೂ ಮಾನವೀಯತೆ ಮೆರೆದ ಕುಟುಂಬವೊಂದು ತೆಗೆದುಕೊಂಡ ನಿರ್ಧಾರ ಹಲವು ರೋಗಿಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ (ಬ್ರೈನ್ ಡೆಡ್) 40 ವರ್ಷದ ಅನಂತ್ ಕುಮಾರ್ ಆರ್. ಅವರ ಕುಟುಂಬ ಅಂಗಾಂಗ ದಾನಕ್ಕೆ ಸಮ್ಮತಿಸಿದ ಪರಿಣಾಮ, ಹಲವು ರೋಗಿಗಳಿಗೆ ಮರುಜೀವ ದೊರೆತಿದೆ.
ಡೆಲಿವರಿ ರೈಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಂತ್ ಕುಮಾರ್ ಅವರು ಇಬ್ಬರು ಮಕ್ಕಳ ತಂದೆಯಾಗಿದ್ದರು. ಅಪಘಾತದ ಬಳಿಕ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ Manipal Hospitals ಗೆ ದಾಖಲಿಸಲಾಯಿತು. ವೈದ್ಯರು ಸತತ ಪ್ರಯತ್ನಪಟ್ಟರೂ, ಮೆದುಳಿಗೆ ಉಂಟಾಗಿದ್ದ ಗಂಭೀರ ಗಾಯಗಳಿಂದ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಬಳಿಕ ವೈದ್ಯಕೀಯವಾಗಿ ಅವರನ್ನು ‘ಬ್ರೈನ್ ಡೆಡ್’ ಎಂದು ಘೋಷಿಸಲಾಯಿತು.
ಈ ಸಂಕಷ್ಟದ ಸಂದರ್ಭದಲ್ಲಿ ಆಸ್ಪತ್ರೆಯ ಅಂಗಾಂಗ ದಾನ ಸಮಾಲೋಚಕರು ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ಅಪಾರ ದುಃಖದ ನಡುವೆಯೂ ಕುಟುಂಬವು ಅಂಗಾಂಗ ದಾನಕ್ಕೆ ಸಮ್ಮತಿಸಿ ಅಪೂರ್ವ ಮಾನವೀಯತೆಯನ್ನು ಪ್ರದರ್ಶಿಸಿತು.
ಕುಟುಂಬದ ಈ ಮಹತ್ವದ ನಿರ್ಧಾರದ ಫಲವಾಗಿ ದಾನಿಯ ಹೃದಯ, ಯಕೃತ್ತು (ಲಿವರ್), ಮೂತ್ರಪಿಂಡಗಳು (ಕಿಡ್ನಿಗಳು) ಹಾಗೂ ಕಣ್ಣಿನ ಕಾರ್ನಿಯಾಗಳನ್ನು ಮೃತ ದಾನಿಗಳ ಅಂಗಾಂಗ ದಾನ ಕಾರ್ಯಕ್ರಮದಡಿ ವಿವಿಧ ರೋಗಿಗಳಿಗೆ ಹಂಚಿಕೆ ಮಾಡಲಾಯಿತು. ಇದರಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಂತಿಮ ಹಂತದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಒಬ್ಬ ರೋಗಿಯೂ ಸೇರಿದ್ದರು.
ರೋಗಿಯು ಕಸಿ ಪೂರ್ವದ ಎಲ್ಲಾ ವೈದ್ಯಕೀಯ ಪರೀಕ್ಷೆಗಳು ಮತ್ತು ಮೌಲ್ಯಮಾಪನಗಳನ್ನು ಪೂರ್ಣಗೊಳಿಸಿದ್ದರಿಂದ, ಅಂಗಾಂಗ ಲಭ್ಯವಾದ ತಕ್ಷಣ ವೈದ್ಯಕೀಯ ತಂಡವು ಯಶಸ್ವಿಯಾಗಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಿತು. ಕಸಿ ಮಾಡಲಾದ ಮೂತ್ರಪಿಂಡವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ರೋಗಿಯ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.
ಈ ಕುರಿತು ಮಾತನಾಡಿದ ಮೂತ್ರಪಿಂಡ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮನೋಹರ್ ಭದ್ರಪ್ಪ ಅವರು, “ಮೃತ ದಾನಿಯ ಅಂಗಾಂಗ ಕಸಿ ಯಶಸ್ವಿಯಾಗಲು ದಾನಿಯ ಕುಟುಂಬ ಮತ್ತು ವೈದ್ಯಕೀಯ ತಂಡದ ಸಮನ್ವಯ ಅತ್ಯಂತ ಮುಖ್ಯ. ಕುಟುಂಬದ ಸಮಯೋಚಿತ ನಿರ್ಧಾರ ಹಾಗೂ ರೋಗಿಯ ಸಿದ್ಧತೆಯೇ ಈ ಕಸಿಯ ಯಶಸ್ಸಿಗೆ ಕಾರಣವಾಗಿದೆ” ಎಂದು ಹೇಳಿದರು.
ನೆಫ್ರಾಲಜಿ ವಿಭಾಗದ ಸಲಹೆಗಾರ ಡಾ. ಮಿತೇಶ್ ಮಕ್ವಾನಾ ಅವರು, “ಅಂತಿಮ ಹಂತದ ಮೂತ್ರಪಿಂಡ ವೈಫಲ್ಯಕ್ಕೆ ಕಿಡ್ನಿ ಕಸಿ ಅತ್ಯುತ್ತಮ ದೀರ್ಘಕಾಲಿಕ ಪರಿಹಾರವಾಗಿದೆ. ರೋಗಿ ಚೇತರಿಸಿಕೊಳ್ಳುತ್ತಿದ್ದಾರೆ. ದಾನಿಗಳ ಕುಟುಂಬದ ಈ ಉದಾತ್ತ ನಿರ್ಧಾರ ಕೇವಲ ಒಂದು ಜೀವವನ್ನು ಉಳಿಸಿಲ್ಲ, ಹಲವಾರು ಕುಟುಂಬಗಳಲ್ಲಿ ಹೊಸ ಭರವಸೆ ಮೂಡಿಸಿದೆ” ಎಂದು ತಿಳಿಸಿದರು.
ಭಾರತದಲ್ಲಿ ಸಾವಿರಾರು ರೋಗಿಗಳು ಅಂಗಾಂಗ ಕಸಿಗಾಗಿ ಕಾಯುತ್ತಿದ್ದರೂ, ಮೃತ ದಾನಿಗಳಿಂದ ಅಂಗಾಂಗ ದಾನವಾಗುವ ಪ್ರಮಾಣ ಇನ್ನೂ ಕಡಿಮೆಯಾಗಿದೆ. ಒಬ್ಬ ಮೃತ ದಾನಿಯು ಹಲವಾರು ಜೀವಗಳನ್ನು ಉಳಿಸುವುದರ ಜೊತೆಗೆ ಅನೇಕ ಮಂದಿಯ ಬದುಕಿನ ಗುಣಮಟ್ಟವನ್ನು ಸುಧಾರಿಸಬಲ್ಲರು. ಆದ್ದರಿಂದ ಅಂಗಾಂಗ ದಾನದ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ.
ಅನಂತ್ ಕುಮಾರ್ ಅವರ ಕುಟುಂಬ ಅನುಭವಿಸಿದ ನಷ್ಟವನ್ನು ಯಾವುದೂ ಭರಿಸಲಾಗದು. ಆದರೆ ಅವರ ಉದಾತ್ತ ನಿರ್ಧಾರದಿಂದ ಇಂದು ಹಲವರ ಬದುಕಿನಲ್ಲಿ ಅವರು ಜೀವಂತವಾಗಿದ್ದಾರೆ. ಕುಟುಂಬದ ಈ ಮಾನವೀಯ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ.
