ಚನ್ನರಾಯಪಟ್ಟಣ, ಜೂನ್ 29: ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಯೋಗ ಶಿಕ್ಷಕಿ ಶ್ರೀಮತಿ ರೇಖಾರಾಣಿ ಎಸ್.ಆರ್. ಅವರಿಗೆ ತಮಿಳುನಾಡಿನ ಚೆನ್ನೈನಲ್ಲಿ ನಡೆದ 12ನೇ ಅಂತರರಾಷ್ಟ್ರೀಯ ಯೋಗ ಆಚರಣೆ ಅಂಗವಾಗಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಬೆಸ್ಟ್ ಯೋಗ ಟೀಚರ್ ಅವಾರ್ಡ್” ನೀಡಿ ಗೌರವಿಸಲಾಯಿತು.

ತಮಿಳುನಾಡು ಕ್ರೀಡಾ ಯೋಗಾಸನ ಅಸೋಸಿಯೇಷನ್ ವತಿಯಿಂದ ನಡೆದ ಸಮಾರಂಭದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಯೋಗ ಶಿಕ್ಷಕರನ್ನು ವಿವಿಧ ವಿಭಾಗಗಳಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಯೋಗ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಪರಿಗಣಿಸಿ ರೇಖಾರಾಣಿ ಎಸ್.ಆರ್. ಅವರಿಗೆ ಅತ್ಯುತ್ತಮ ಯೋಗ ತರಬೇತಿ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರೇಖಾರಾಣಿ ಅವರು ಹಿಂದಿಯಲ್ಲಿ ಎಂ.ಎ. ಹಾಗೂ ಬಿ.ಎಡ್. ಪದವೀಧರರಾಗಿದ್ದು, ಯೋಗ ಡಿಪ್ಲೊಮಾ ಮತ್ತು RYT-200 ಪ್ರಮಾಣಿತ ಯೋಗ ಶಿಕ್ಷಕರಾಗಿದ್ದಾರೆ. ಅವರು ನವದೆಹಲಿಯ ಇಂಡಿಯನ್ ಯೋಗ ಅಸೋಸಿಯೇಷನ್ (IYA) ವೃತ್ತಿಪರ ಸದಸ್ಯೆಯೂ ಆಗಿದ್ದಾರೆ.
ಹೋಲಿಸ್ಟಿಕ್ ಯೋಗಮುದ್ರಾ ಕೇಂದ್ರದ ಸಂಸ್ಥಾಪಕರಾಗಿರುವ ಅವರು, ಹಲವು ವರ್ಷಗಳಿಂದ ಆನ್ಲೈನ್ ಮತ್ತು ಆಫ್ಲೈನ್ ಯೋಗ ತರಗತಿಗಳು, ಕಾರ್ಯಾಗಾರಗಳು ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಸಾವಿರಾರು ಜನರಿಗೆ ಯೋಗಾಭ್ಯಾಸದ ಮಹತ್ವ ತಿಳಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಅತಿಥಿ ಯೋಗ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಮಕ್ಕಳಲ್ಲಿ ಆರೋಗ್ಯಕರ ಜೀವನಶೈಲಿ, ಶಿಸ್ತು ಮತ್ತು ಏಕಾಗ್ರತೆಯನ್ನು ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ.

ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲ್ಲದೆ, ಅನೇಕ ಯೋಗ ಶಿಕ್ಷಕರನ್ನು ರೂಪಿಸಿ ಅವರು ಸ್ವತಂತ್ರವಾಗಿ ಯೋಗ ಕೇಂದ್ರಗಳನ್ನು ಆರಂಭಿಸಲು ಪ್ರೇರಣೆ ನೀಡಿರುವುದು ಅವರ ಮತ್ತೊಂದು ವಿಶೇಷ ಸಾಧನೆಯಾಗಿದೆ.
ರೇಖಾರಾಣಿ ಅವರು ನಾರಿ ಶಕ್ತಿ ಪ್ರಶಸ್ತಿ, ಯೋಗ ಕಿರಣ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಗಳಲ್ಲಿ ತೀರ್ಪುಗಾರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಯೋಗ ಶಿಕ್ಷಕರ ಕಲ್ಯಾಣ ಸಂಘದ ಉಪ ಸಮಿತಿ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೇಖಾರಾಣಿ ಎಸ್.ಆರ್., “ಈ ಗೌರವ ನನ್ನೊಬ್ಬರ ಸಾಧನೆಯಲ್ಲ. ಯೋಗದ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಲು ಶ್ರಮಿಸುತ್ತಿರುವ ಪ್ರತಿಯೊಬ್ಬ ಯೋಗ ಶಿಕ್ಷಕರಿಗೂ ಸಲ್ಲುವ ಗೌರವವಾಗಿದೆ. ಯೋಗವು ಕೇವಲ ದೇಹವನ್ನು ಬಗ್ಗಿಸುವ ಕಲೆ ಅಲ್ಲ; ಅದು ವ್ಯಕ್ತಿತ್ವವನ್ನು ರೂಪಿಸುವ ಸಾಧನೆ. ಈ ಪ್ರಶಸ್ತಿ ನನಗೆ ಇನ್ನಷ್ಟು ಜವಾಬ್ದಾರಿ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಕ್ಕಳಿಗೆ, ಕುಟುಂಬಗಳಿಗೆ ಹಾಗೂ ಸಮಾಜಕ್ಕೆ ಯೋಗದ ಬೆಳಕನ್ನು ತಲುಪಿಸಲು ಶ್ರಮಿಸುತ್ತೇನೆ” ಎಂದು ಹೇಳಿದರು.
ಪ್ರಶಸ್ತಿಗೆ ಕಾರಣರಾದ ಸಂಘಟಕರು, ತಮ್ಮ ಗುರುಗಳು, ವಿದ್ಯಾರ್ಥಿಗಳು, ಪೋಷಕರು, ಕುಟುಂಬದವರು ಹಾಗೂ ತಮ್ಮ ಸೇವಾ ಪಯಣಕ್ಕೆ ಬೆಂಬಲ ನೀಡಿದ ನ್ಯೂ ಅಲೈನ್ಸ್ ಕಾಮರ್ಸ್ ಕಾಲೇಜಿನ ಪ್ರಾಂಶುಪಾಲರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
-ಮಂಜುನಾಥ್ ಐ.ಕೆ
