ರೋಗಿ ಬಯಸಿದ್ದೂ ಹಾಲನ್ನ, ವೈದ್ಯ ಹೇಳಿದ್ದೂ ಹಾಲನ್ನ ಅಂದಂತೆ, ಮೋಹನ ನನ್ನೊಡನೆ ಮೂಡಿಗೆರೆಗೆ ಬಸ್ ಹತ್ತಿದ.
ಬೆಂಗಳೂರಿನ ರಾಜಾಜಿನಗರದ ಎನ್.ವೈ.ಎ.ಸಿ.ಯವರು ರಾಜ್ಯಮಟ್ಟದ ಚಾರಣವನ್ನು ಶಿರಾಡಿ ಘಾಟಿಯ ರೈಲ್ವೆ ಟ್ರ್ಯಾಕ್ನಲ್ಲಿ ಹಮ್ಮಿಕೊಂಡಿರುವುದಾಗಿ ಹಾಗೂ ಆಸಕ್ತರು ಸಂಪರ್ಕಿಸಬೇಕೆಂದು ಪ್ರಜಾವಾಣಿಯಲ್ಲಿ ಜಾಹೀರಾತು ನೀಡಿದ್ದರು. ಉದ್ಯೋಗದ ಏಕತಾನತೆಯಿಂದ ಬೇಸತ್ತಿದ್ದ ನಾನು ಅವರನ್ನು ಸಂಪರ್ಕಿಸಿ ವಿವರಗಳನ್ನು ತಿಳಿದುಕೊಂಡು ಅವರೊಡನೆ ಚಾರಣಕ್ಕೆ ಹೊರಟಿದ್ದೆ. ಸರಿ, ಈ ಮೋಹನನ ಚರ್ಬಿ ಕರಗಿಸೋಣ ಎಂದುಕೊಂಡು ಅವನನ್ನೂ ನನ್ನೊಡನೆ ಹೊರಡಿಸಿಕೊಂಡಿದ್ದೆ.
ಸೋಮವಾರ ಸಂಜೆ ಮೂಡಿಗೆರೆ ತಲುಪಿದೆವು. ಗುರುವಾರ ಬೆಳಗಿನ ಜಾವವೇ ಸಕಲೇಶಪುರದಲ್ಲಿ ಎನ್.ವೈ.ಎ.ಸಿ.ಯವರ ತಂಡವನ್ನು ನಾವು ಸೇರಿಕೊಳ್ಳಬೇಕಿತ್ತು. ಮಂಗಳವಾರ ಬೆಳಗ್ಗಿನಿಂದಲೇ ಈ ಮೋಹನನಿಗೆ ಶೀತ-ಜ್ವರ ಆರಂಭವಾಗಬೇಕೇ? ನಿಮಿಷಕ್ಕೆ ಸರಾಸರಿ ಹದಿನೈದು ಸೀನನ್ನು ನಿರಂತರವಾಗಿ ಹೊರಹಾಕತೊಡಗಿದ. ನೀರು ಬದಲಾದ್ದರಿಂದಲೋ, ಮನೆಯಿಂದ ಹೊರಟ ಟೆನ್ಶನ್ನಿಂದಲೋ, ವಾತಾವರಣ ಬದಲಾದ್ದರಿಂದಲೋ ಶೀತ-ಜ್ವರ ನಿಯಂತ್ರಣಕ್ಕೆ ಬರಲಿಲ್ಲ.
ಬುಧವಾರಕ್ಕೆ ಈತನ ಶೀತ-ಜ್ವರ ಸ್ವಲ್ಪ ಕಡಿಮೆಯಾಗಿತ್ತು. ಆದರೆ ಸುಸ್ತು ಹಾಗೆಯೇ ಇದ್ದದ್ದರಿಂದ ಅವನನ್ನು ಚಾರಣಕ್ಕೆ ಕರೆದೊಯ್ಯುವುದು ಸೂಕ್ತವೆನಿಸಲಿಲ್ಲ.
ನನಗೂ ಇವನನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಆದರೆ ರೈಲ್ವೆ ಟ್ರ್ಯಾಕ್ನಲ್ಲಿ ಟ್ರೆಕ್ಕಿಂಗ್ ಮಾಡಬೇಕೆನ್ನುವುದು ನನ್ನ ಬಹುದಿನಗಳ ಆಸೆ. ಸಂಜೆಯ ವೇಳೆಗೆ ನನ್ನೊಡನೆ ಷಟಲ್ ಆಡುವ ಮಟ್ಟಿಗೆ ಚೇತರಿಸಿಕೊಂಡ ಮೋಹನ ತಾನೂ ಟ್ರೆಕ್ಕಿಂಗ್ಗೆ ಬರಲು ಸಿದ್ಧನಾದ. ಮೂರು ದಿನಗಳ ಟ್ರೆಕ್ಕಿಂಗ್ಗೆ ಹೀಗೆ ಚೇತರಿಸಿಕೊಳ್ಳುತ್ತಿರುವ ಅಭ್ಯರ್ಥಿಯನ್ನು ಕರೆದುಕೊಂಡು ಹೋಗುವುದು, ಘಟ್ಟಕ್ಕೆ ಹೋಗುವವರಿಗೆ ಕೊಡಲಿ ಸಿಕ್ಕಿಸಿದಂತೆ ಎಂದುಕೊಂಡು ಅವನಿಗೆ ವಿಶ್ರಾಂತಿ ಪಡೆಯುವಂತೆ ಹೇಳಿದೆ. ಹಿಂದಿನ ದಿನವೇ ಸಕಲೇಶಪುರಕ್ಕೆ ಹೋಗಿ ಉಳಿದುಕೊಳ್ಳಬೇಕಾಗಿದ್ದರಿಂದ ಬೆಳಗ್ಗಿನಿಂದಲೇ ಮಾಡಿಕೊಂಡಿದ್ದ ಸಿದ್ಧತೆಗಳೊಂದಿಗೆ ಗೆಳೆಯ ನಾಸೀರ್ಗೆ ಹೊರಡಲು ಹೇಳಿ ಕಳಿಸಿದೆ.
ಗೆಳೆಯ ನಾಸೀರ್ ಹಾಗೂ ನಾನು ಈ ಚಾರಣ ತಂಡವನ್ನು ಸಕಲೇಶಪುರದಲ್ಲಿ ಸೇರಿಕೊಂಡು ಮುಂದೆ ಹೋಗುವುದೆಂದು ನಿರ್ಧಾರವಾಯಿತು. ಬೆಳಿಗ್ಗೆ ಮೂಡಿಗೆರೆಯಿಂದ ಹೊರಟು ಬೆಂಗಳೂರಿನಿಂದ ಬರುವ ಎನ್.ವೈ.ಎ.ಸಿ. ತಂಡವನ್ನು ಸಮಯಕ್ಕೆ ಸರಿಯಾಗಿ ಸೇರುವುದು ಸಾಧ್ಯವಿಲ್ಲವೆಂದು ಅರಿತು, ಹಿಂದಿನ ದಿನವೇ ಸಕಲೇಶಪುರದ ಯಾವುದಾದರೂ ವಸತಿಗೃಹದಲ್ಲಿ ತಂಗಿ, ಬೆಳಿಗ್ಗೆ ಅವರೊಡನೆ ಸೇರುವುದೆಂದು ಯೋಜಿಸಿದೆವು.
ಮೂರು ದಿನಗಳ ಕಾರ್ಯಕ್ರಮವಾದ್ದರಿಂದ ಕನಿಷ್ಠ ಎರಡು ರಾತ್ರಿ ಕಾಡಿನಲ್ಲಿ ಕಳೆಯಬೇಕಾಗಬಹುದೆಂದು ಬೇಕಾದ ವಸ್ತುಗಳ ಜೋಡಣೆ ಆರಂಭವಾಯಿತು. ಕತ್ತಿ, ಟಾರ್ಚ್, ಎರಡು ಜೀನ್ಸ್ ಪ್ಯಾಂಟ್, ಎರಡು ಟೀ-ಶರ್ಟ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ನೀರಿನ ಬಾಟಲಿ ಇತ್ಯಾದಿ.
ಹಿಂದಿನ ದಿನ ಸಂಜೆ ಐದು ಗಂಟೆಗೆ ನಾಸೀರ್ನನ್ನು ಕಾಯುತ್ತಾ ಕುಳಿತರೆ ಆಸಾಮಿ ಪತ್ತೆಯೇ ಇಲ್ಲ! ಅವನ ಮನೆಗೆ ಹೋದರೆ, ಅವನು ಬೆಳಿಗ್ಗೆಯೇ ಉಳ್ಳಾಲದಲ್ಲಿರುವ ತನ್ನ ಅಕ್ಕನ ಮನೆಗೆ ಹೋಗಿದ್ದಾನಂತೆ. ಅಯೋಗ್ಯನ ಮೇಲೆ ಅಸಾಧ್ಯ ಸಿಟ್ಟು ಬಂತು. ನಾನಂತೂ ಹೊರಟಾಗಿದೆ; ಇನ್ನು ನಿಧಾನಿಸುವ ಮಾತೇ ಇಲ್ಲ. ಆತ ನನಗೊಂದು ಮಾತು ಹೇಳಿ ಹೋಗುವುದಾದರೂ ಬೇಡವಾ?
ಸಂಜೆಯ ಕೊನೆಯ ಬಸ್ ಆರೂವರೆಗೆ. ಭಾರವಾಗಿದ್ದ ಬ್ಯಾಗನ್ನೆತ್ತಿಕೊಂಡು ಒಂದೇ ಉಸಿರಿಗೆ ಬಸ್ಸ್ಟಾಪಿಗೆ ಓಡಿದೆ. ಬಸ್ ಕಂಡಕ್ಟರ್ ಟಿ.ಸಿ. ಬಳಿ ಎಂಟ್ರಿ ಹಾಕಿಸಲು ಹೋಗಿದ್ದರೆ, ಡ್ರೈವರ್ ಟೈರ್ ಮೇಲೆ ನಿಂತುಕೊಂಡು ಕಿಟಕಿಯೊಳಗೆ ತಲೆ ತೂರಿಸಿ, ಕಿಕ್ಕಿರಿದು ತುಂಬಿದ್ದ ಜನರನ್ನು ಗದರಿಸಿ, ಜಬರಿಸಿ ಹಿಂದೆ-ಮುಂದೆ ಒತ್ತಿಸಿ, ಕೂರಿಸಿ, ನಿಲ್ಲಿಸಿ ಹೈರಾಣಾಗುತ್ತಿದ್ದ.
ವಿಪರೀತ ರಷ್ ಆಗಿದ್ದ ಬಸ್ಗೆ ಹತ್ತುವುದು ಹೇಗಪ್ಪಾ ಎಂದು ಯೋಚಿಸುತ್ತಿದ್ದಾಗ, ಆ ದಿನ ಶುಕ್ರವಾರವೆಂಬುದು ನೆನಪಿಗೆ ಬಂತು. ಅಂದು ಮೂಡಿಗೆರೆಯ ವಾರದ ಸಂತೆ. ಜನ್ನಾಪುರ, ಬೆಟ್ಟದಮನೆ, ಹುರುಡಿ, ಹಾನುಬಾಳು, ಸಕಲೇಶಪುರ ಕಡೆಗಳ ಸಾಕಷ್ಟು ಜನರು ಮೂಡಿಗೆರೆ ಸಂತೆಗೆ ಬಂದವರು ಈ ಕಡೆಯ ಬಸ್ಸನ್ನೇ ಆಶ್ರಯಿಸುತ್ತಾರೆ.
ಹೇಗೋ ಕೈ ಮತ್ತು ತಲೆ ತೂರಿಸಿದರೆ, ಮೈಯನ್ನು ಒಳಗೆ ಬಿಡುತ್ತಿಲ್ಲ ಬಾಗಿಲಲ್ಲಿ ನಿಂತಿದ್ದ ಜನ. ಮುದುಡಿಕೊಂಡು ತಲೆ, ಮೈ ತೂರಿಸಿದರೆ ಕೈಯಲ್ಲಿದ್ದ ಮೂಟೆಯಷ್ಟಿದ್ದ ಬ್ಯಾಗ್ ಮಾತ್ರ ಬಸ್ನಿಂದ ಹೊರಗೇ ಇದೆ! ಬ್ಯಾಗ್ ಅನ್ನು ಬಿಟ್ಟು ಕೈಯನ್ನು ಒಳಗೆಳೆದುಕೊಳ್ಳುವಂತೆಯೂ ಇರಲಿಲ್ಲ.
ಸ್ವಲ್ಪ ದೂರದ ಗಂಗನಮಕ್ಕಿ ತಲುಪುವಷ್ಟರಲ್ಲಿ ರಸ್ತೆಯ ಗುಂಡಿ-ಗೊಟರುಗಳಿಂದ ಆಗುವ ಕುಲುಕಾಟ, ತಿರುವಿನಲ್ಲಾಗುವ ಒತ್ತುವಿಕೆ, ಗುಂಡಿಯಿಳಿದಾಗ ಆಗುವ ಜಪ್ಪುವಿಕೆಯಿಂದ ಅಂತೂ ಇಂತೂ ನಾನು ಬ್ಯಾಗಿನ ಸಮೇತ ಇಡಿಯಾಗಿ ಬಸ್ ಒಳಗೆ ಸೇರಿದೆ.
ಹಳೇಮೂಡಿಗೆರೆ ರೈಸ್ಮಿಲ್ ಬಳಿ ಬರುವಷ್ಟರಲ್ಲಿ ಬಣಕಲ್ ಕಡೆಗೆ ಹೋಗುವ ಮೆಟಾಡೋರೊಂದು ಆ ಏರನ್ನು ಏರಲು ಸಾಧ್ಯವಾಗದೆ ಮುಕ್ಕಿರಿಯುತ್ತಾ ನಿಂತಿತ್ತು. ಎಂಟು-ಹತ್ತು ಜನ ಇಳಿದು ಅದನ್ನು ಹಿಂದಿನಿಂದ ನೂಕುತ್ತಿದ್ದರು.
ಆ ಮೆಟಾಡೋರ್ ಮೂಡಿಗೆರೆಯ ಅತ್ಯಂತ ಹಳೆಯ ವಾಹನ. ಡ್ರೈವರ್ ಕಂ ಮಾಲೀಕ ನುಕ್ಕಣ್ಣ ಇಡೀ ಮೂಡಿಗೆರೆಗೇ ವರ್ಲ್ಡ್ ಫೇಮಸ್. ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಮೆಟಾಡೋರ್ ನಿಲ್ಲಿಸಿಕೊಂಡು, “ಯಾರ್ರೀ ಹೊರಟ್ಟಿ… ಸಬ್ಬೇನಹಳ್ಳಿ, ಚಕ್ಮಕ್ಕಿ, ಬಣಕಲ್, ಕೊಟ್ಟಿಗೆಹಾರ…” ಎಂದು ಕೂಗತೊಡಗಿದರೆ, ಇಪ್ಪತ್ತು-ಮೂವತ್ತು ನಿಮಿಷದಲ್ಲಿ ವಾಹನ ಭರ್ತಿಯಾಗುತ್ತಿತ್ತು.
ಇಟ್ಟಿರುವುದು ಮೆಟಾಡೋರ್; ತುಂಬಿಸುವುದು ಮಾತ್ರ ಕೆ.ಎಸ್.ಆರ್.ಟಿ.ಸಿ. ಬಸ್ನಷ್ಟೇ. ಇಲ್ಲಿ ಸ್ಟಾರ್ಟ್ ಮಾಡುವ ಪ್ರಶ್ನೆಯೇ ಇಲ್ಲ. ಕಂಡಕ್ಟರ್ ಗಣೇಶನಿಗೆ, “ಏಯ್, ಬಡಿಗೆ ತೆಗಿಯೋ” ಎಂದ ಕೂಡಲೇ, ಅವನು ಅದಕ್ಕಾಗಿಯೇ ಕಾಯುತ್ತಿದ್ದವನಂತೆ ಹಿಂದಿನ ಟೈರಿಗೆ ಅಡ್ಡಕೊಟ್ಟಿದ್ದ ಬಡಿಗೆಯನ್ನು ಕಾಲಿನಿಂದ ಒದ್ದು ಬಾಗಿಲು ಪಕ್ಕದ ಸೀಟಿನಡಿ ತುರುಕುತ್ತಿದ್ದಂತೆ ಮೆಟಾಡೋರ್ ನಿಧಾನವಾಗಿ “ಜೀರ್… ಜಿಕ್… ಜೀರ್… ಜಿಕ್…” ಎಂದು ಮುಂದುವರೆಯುತ್ತಾ ವೇಗ ಪಡೆದುಕೊಳ್ಳಲಾರಂಭಿಸುತ್ತಿತ್ತು.
ಗಂಗನಮಕ್ಕಿಯವರೆಗೆ ವೇಗವಾಗಿ ಓಡಿದ ಮೆಟಾಡೋರ್ ಅಷ್ಟರೊಳಗೆ ಜರ್ಕ್ನಲ್ಲಿ ಸ್ಟಾರ್ಟ್ ಆದರೆ ಆಯಿತು; ಇಲ್ಲದಿದ್ದರೆ ಪ್ರಯಾಣಿಕರನ್ನು ದೇವರೇ ಕಾಪಾಡಬೇಕು.
ಹಳೇಮೂಡಿಗೆರೆ ಬಳಿ ಏರು ಆರಂಭವಾಗುತ್ತಿದ್ದಂತೆ ನುಕ್ಕಣ್ಣ, “ಬಡಿಗೆ ಕೊಡೋ… ಬಡಿಗೆ ಕೊಡೋ…” ಎಂದು ಬೊಬ್ಬೆ ಹೊಡೆಯಲಾರಂಭಿಸುತ್ತಾನೆ. ಗಣೇಶ ಬಡಿಗೆ ಕೊಟ್ಟ ಕೂಡಲೇ, ಯುದ್ಧಕಾಲದಲ್ಲಿ ಸರ್ಕಾರ ಹೇಳುವಂತೆ, “ಹೆಂಗಸರು, ಮಕ್ಕಳು, ವಯಸ್ಸಾದವರು ಬಿಟ್ಟು ಉಳಿದವರೆಲ್ಲಾ ಇಳೀರಿ… ಎಲ್ಲರೂ ಕೈಕೊಡಿ… ಐಸಾ… ತಳ್ಳು… ನೂಕು… ಐಸಾ…” ಎಂದು ಕೂಗತೊಡಗುತ್ತಾನೆ.
ಎರಡು ಕಿಲೋಮೀಟರ್ ಇಳಿಜಾರಿನಲ್ಲಿ ಬಂದ ವಾಹನವನ್ನು ಈಗ ಅರ್ಧ ಕಿಲೋಮೀಟರ್ ಏರಿನಲ್ಲಿ ತಳ್ಳಬೇಕು! ಅವರ ಕರ್ಮ! ಶಪಿಸುತ್ತಲೇ ಎಲ್ಲರೂ ನೂಕುತ್ತಿದ್ದರು.
ಮುಂದುವರೆಯುವುದು…

