ಡಾ. ವೈ.ಎಸ್. ವೀರಭದ್ರಪ್ಪ ಅವರು ಮೂಲತಃ ಹೋಮಿಯೋಪತಿ ವೈದ್ಯರು. ವೃತ್ತಿಯಲ್ಲಿ ಔಷಧಿ ವ್ಯಾಪಾರಿಯಾಗಿದ್ದ ಅವರು ಕೃಷಿಕ ಕುಟುಂಬದಿಂದ ಬಂದವರಾಗಿದ್ದು, ಸಮಾಜಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು.
ಅವರ ಜೀವನ ಪಯಣವನ್ನು ಆಧರಿಸಿ ‘ಸೇವಾರತ್ನ’ ಎಂಬ ಕೃತಿಯನ್ನು ಬಿ.ಎಸ್. ವನಜಾಕ್ಷಿ ಬೆಟ್ಟದಾಲೂರು ರಚಿಸಿದ್ದು, ಅದು ಇದೇ ಜುಲೈ 5ರಂದು ಲೋಕಾರ್ಪಣೆಗೊಳ್ಳುತ್ತಿದೆ.
ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಯರೇಹಳ್ಳಿ ಗ್ರಾಮದ ರೈತ ಕುಟುಂಬದ ವೈ.ವಿ. ಸಿದ್ಧರಾಮಣ್ಣ ಹಾಗೂ ಬಂಧಮ್ಮ ದಂಪತಿಯ ಪುತ್ರರಾಗಿ 1948ರ ನವೆಂಬರ್ 16ರಂದು ಜನಿಸಿದ ಇವರ ಮೂಲ ಹೆಸರು ಲೋಕೇಶ್. ನಂತರ ಮನೆದೇವರಾದ ವೀರಭದ್ರಸ್ವಾಮಿಯ ಹೆಸರನ್ನು ಇಟ್ಟು ವೀರಭದ್ರಪ್ಪ ಎಂದು ನಾಮಕರಣ ಮಾಡಲಾಯಿತು. ಸಮಾಜಸೇವೆಯ ಮೂಲಕ ಅವರು ಮನೆಮಾತಾದರು. ತಮ್ಮ ಊರು ಹಾಗೂ ಸುತ್ತಮುತ್ತಲಿನ ಬಡಜನರಿಗೆ ನೆರವಾಗುವುದರ ಜೊತೆಗೆ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಸೇವೆಯೂ ಅವರದ್ದಾಗಿದೆ.
ಕೃತಿಗೆ ಮುನ್ನುಡಿ ಬರೆದಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು, “ಬದುಕು ಎಷ್ಟು ಶ್ರೀಮಂತವಾಗಿದೆ ಎನ್ನುವುದಕ್ಕಿಂತ ಎಷ್ಟು ನೆಮ್ಮದಿಯಾಗಿದೆ ಎನ್ನುವುದು ಮುಖ್ಯ. ಕನ್ನಡಿ ಸ್ವಚ್ಛವಾಗಿದ್ದರೆ ಪ್ರತಿಬಿಂಬ ಸುಂದರವಾಗಿ ಕಾಣುತ್ತದೆ. ಹಾಗೆಯೇ ಮನಸ್ಸು ಸ್ವಚ್ಛವಾಗಿದ್ದರೆ ಇಡೀ ಜಗತ್ತು ಸುಂದರವಾಗಿ ಕಾಣುತ್ತದೆ. ಇದನ್ನು ನಂಬಿ ನಡೆದವರು ವೈ.ಎಸ್.ವಿ. ಅವರು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, “ಹಾಸನದ ಸಾರ್ವಜನಿಕ ಬದುಕಿನಲ್ಲಿ ಅವರು ಎಷ್ಟು ಹಾಸುಹೊಕ್ಕಾಗಿದ್ದಾರೆಯೆಂದರೆ, ಯಾವುದೇ ಸಾಮಾಜಿಕ ಕಾರ್ಯ ನಡೆದರೂ ಅವರ ಉಪಸ್ಥಿತಿ ಅನಿವಾರ್ಯವಾಗಿತ್ತು” ಎಂದು ಬರೆದಿದ್ದಾರೆ.
ವೀರಭದ್ರಪ್ಪ ಅವರು ಹಾಸನದ ಎಂ. ಕೃಷ್ಣ ಅಂಧ ಮಕ್ಕಳ ಶಾಲೆಯ ಸಂಸ್ಥಾಪಕರು, ಜನಕಲ್ಯಾಣ ರಿಸರ್ಚ್ ಅಂಡ್ ಚಾರಿಟೇಬಲ್ ಟ್ರಸ್ಟ್ನ ಖಜಾಂಚಿ, ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷರು, ಸಂಜೀವಿನಿ ಸಹಕಾರಿ ಆಸ್ಪತ್ರೆಯ ಕೋಶಾಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದ್ರವ್ಯಾಧಿಕಾರಿಗಳು ಹಾಗೂ ಹಾಸನದಲ್ಲಿ ನಡೆದ 65ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇಲ್ಲಿ ನನಗೆ ಆ ದಿನಗಳು ನೆನಪಾಗುತ್ತವೆ. ಆಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದವರು ಬಿ.ಎನ್. ರಾಮಸ್ವಾಮಿ. ಅವರು ಅಧ್ಯಕ್ಷರಾಗಿ ಆಯ್ಕೆಯಾದ ದಿನವೇ ಅವರನ್ನು ಸಂದರ್ಶಿಸಿ ಮೈಸೂರಿನ ಮಹಾನಂದಿ ಪತ್ರಿಕೆಗೆ ಲೇಖನ ಬರೆದಿದ್ದೆ. ತಮ್ಮ ಅವಧಿಯಲ್ಲೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವುದಾಗಿ ಅವರು ಹೇಳಿದ್ದು, ಅದರಂತೆ ಚನ್ನವೀರ ಕಣವಿ ಅವರ ಅಧ್ಯಕ್ಷತೆಯಲ್ಲಿ 65ನೇ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ಆ ಸಂದರ್ಭದಲ್ಲಿ ಬಿಡುಗಡೆಯಾದ ‘ಹೊಯ್ಸಳ ಸಂಪದ’ ಕೃತಿ ಇಂದಿಗೂ ಮಹತ್ವದ ಗ್ರಂಥವಾಗಿದೆ.
ಕೃತಿಯಲ್ಲಿ ಸಂಪಾದಕಿ ವೈ.ಎಸ್.ವಿ. ಅವರ ಬಾಲ್ಯದ ದಿನಗಳನ್ನು ಅವರ ಮಾತುಗಳಲ್ಲೇ ಕಟ್ಟಿಕೊಟ್ಟಿದ್ದಾರೆ.
“ಆ ಕಾಲದಲ್ಲಿ ನಮ್ಮ ಮನೆ ಊರಿನ ಶ್ರೀಮಂತ ಮನೆಗಳಲ್ಲಿ ಒಂದಾಗಿತ್ತು. ನಾನು ಕುದುರೆ ಸವಾರಿ ಮಾಡುತ್ತಿದ್ದೆ. ಸೈಕಲ್ನಲ್ಲಿ ಊರೂರು ಸುತ್ತುತ್ತಿದ್ದೆ. ವ್ಯವಸಾಯವನ್ನು ಚಿಕ್ಕಪ್ಪಂದಿರಿಂದ ಕಲಿತೆ. ಊರಿನ ಬಡವರಿಗೆ ಕಾಳುಕಡ್ಡಿ ನೀಡುವ ಪದ್ಧತಿ ನಮ್ಮ ಮನೆಯಲ್ಲಿ ಇತ್ತು. ನಮ್ಮ ಊರಿಗೆ ಒಬ್ಬರೇ ಶಿಕ್ಷಕರಿದ್ದರು. ಅವರಿಗೆ ನಮ್ಮ ಮನೆಯಲ್ಲಿ ಊಟ-ವಸತಿ ವ್ಯವಸ್ಥೆ ಇತ್ತು. ಊರಿಗೆ ನನ್ನ ಕೈಲಾದಷ್ಟು ಸಹಾಯ ಮಾಡಬೇಕು ಎಂಬ ಹಂಬಲ ಆಗಲೇ ಇತ್ತು. ಈಜು, ಮರ ಹತ್ತುವುದು, ನಾಟಕ ಹಾಗೂ ಆಟ-ಪಾಠ ಎಲ್ಲವನ್ನೂ ತಾನಾಗಿಯೇ ಕಲಿತೆ. ತಿಮ್ಮಪ್ಪನ ದೇವಸ್ಥಾನದ ಆವರಣದಲ್ಲಿ ಮರಳು ಹರಡಿ ಭುಜಂಗರಾಯರು ಹಾಗೂ ರಾಮಚಂದ್ರರಾವ್ ನನಗೆ ಅಕ್ಷರಾಭ್ಯಾಸ ಮಾಡಿಸಿದರು. ನಮ್ಮ ತೋಟದಲ್ಲಿ ಮೂರು ಸಾವಿರ ಮಾವಿನ ಮರಗಳಿದ್ದವು. ನೆಂಟರಿಷ್ಟರಿಗೆ ಹಣ್ಣು ಹಂಚಿ ಉಳಿದವುಗಳನ್ನು ಮೇಟಿಕುರ್ಕೆ ಹಾಗೂ ಕಿತ್ತನಕೆರೆ ಗ್ರಾಮಗಳಲ್ಲಿ ಮಾರಾಟ ಮಾಡುತ್ತಿದ್ದೆವು.”
ಮೇಟಿಕುರ್ಕೆ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ‘ಯಕ್ಷಪ್ರಶ್ನೆ’ ನಾಟಕದಲ್ಲಿ ಅಭಿನಯಿಸಿದರು. ಶಾಲೆಯ ದೀಪಾವಳಿ ನಾಟಕದಲ್ಲಿ ಸ್ತ್ರೀ ಪಾತ್ರ ನಿರ್ವಹಿಸಿದರು. ಶಾಲಾ ದಿನಾಚರಣೆಯಲ್ಲಿ ದ.ರಾ. ಬೇಂದ್ರೆಯವರ ‘ಇಳಿದು ಬಾ ತಾಯಿ’ ಹಾಡನ್ನು ಹಾಡಿ ಬಹುಮಾನ ಪಡೆದರು.
1964ರಲ್ಲಿ ಪಿಯುಸಿಗಾಗಿ ತಿಪಟೂರಿನ ಕಲ್ಪತರು ಕಾಲೇಜಿಗೆ ಸೇರಿದರು. ನಂತರ ಹಾಸನದಲ್ಲಿ ಎರಡು ವರ್ಷ ಫಾರ್ಮಸಿ ಶಿಕ್ಷಣ ಪಡೆದು, ಬೆಂಗಳೂರಿನ ಹೋಮಿಯೋಪತಿ ಕಾಲೇಜಿನಲ್ಲಿ ಎಂ.ಎ.ಎಂ.ಬಿ.ಎಚ್.ಎಸ್. ಪದವಿ ಪೂರ್ಣಗೊಳಿಸಿದರು. ಬಳಿಕ ಹಾಸನದ ವಲ್ಲಭಭಾಯಿ ರಸ್ತೆಯಲ್ಲಿದ್ದ ಡಾ. ಕೆ.ಪಿ. ವೀರಾಚಾರ್ ಅವರ ಬಳಿ ಸಹಾಯಕ ವೈದ್ಯರಾಗಿ ಕಾರ್ಯನಿರ್ವಹಿಸಿದರು.
ಆ ಸಂದರ್ಭದಲ್ಲಿ ಗೊರೂರಿನಲ್ಲಿ ಹೇಮಾವತಿ ಜಲಾಶಯ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಆಗ ಇಡೀ ಗೊರೂರಿನಲ್ಲಿ ಒಂದೇ ಒಂದು ಆರ್ಸಿಸಿ ಮನೆ ಇರಲಿಲ್ಲ. ಆದರೆ ರೆವಿನ್ಯೂ ಇಲಾಖೆಯ ಅಧಿಕಾರಿಯೊಬ್ಬರು ಮೂರು ಆರ್ಸಿಸಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿದ್ದರು. ಅವುಗಳಲ್ಲಿ ಒಂದನ್ನು ಬಾಡಿಗೆಗೆ ಪಡೆದು ವಿನಾಯಕ ಕ್ಲಿನಿಕ್ ಆರಂಭಿಸಿ ಸಂಜೆ ಹಾಸನಕ್ಕೆ ಹಿಂದಿರುಗುತ್ತಿದ್ದರು.
ನಂತರ ಹಾಸನದ ಎವಿಕೆ ಕಾಲೇಜಿನಲ್ಲಿ ರಾತ್ರಿ ಪಾಳಿಯ ಕಾಲೇಜು ಆರಂಭವಾದಾಗ, ಬಳೆಗಾರ ಬೀದಿಯ ಹಾಸನಾಂಬ ದೇವಸ್ಥಾನದ ಸಮೀಪ ರೇಣುಕಾ ಕ್ಲಿನಿಕ್ ಆರಂಭಿಸಿದರು. ಅಲ್ಲಿ ಜನಸಂಪರ್ಕ ವೃದ್ಧಿಯಾಗಿ ಎರಡು ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಲು ಸಾಧ್ಯವಾಯಿತು. ಇದೇ ವೇಳೆ ರಾತ್ರಿ ಕಾಲೇಜಿನಲ್ಲಿ ಬಿಎ ಪದವಿ ಹಾಗೂ ನಂತರ ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿಯನ್ನೂ ಪತ್ರವ್ಯವಹಾರ ಶಿಕ್ಷಣದ ಮೂಲಕ ಪೂರ್ಣಗೊಳಿಸಿದರು.
ಕೃತಿಯಲ್ಲಿ ಅನೇಕ ಲೇಖಕರು, ಸ್ನೇಹಿತರು ಹಾಗೂ ಬಂಧುಗಳು ವೈ.ಎಸ್.ವಿ. ಅವರನ್ನು ತಾವು ಕಂಡ ರೀತಿಯಲ್ಲಿ ಪರಿಚಯಿಸಿದ್ದಾರೆ.
ಈಗ ಹಾಸನ ನಗರದ ಕೇಂದ್ರಭಾಗದಲ್ಲಿರುವ ನಗರ ಸಾರಿಗೆ ಬಸ್ ನಿಲ್ದಾಣವು ಹಿಂದೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣವಾಗಿತ್ತು. ನಂತರ ಅದನ್ನು ಚನ್ನಪಟ್ಟಣ ಕೆರೆ ಪ್ರದೇಶಕ್ಕೆ ಸ್ಥಳಾಂತರಿಸಿ ಹಳೆಯ ಜಾಗವನ್ನು ವಾಣಿಜ್ಯ ಸಂಕೀರ್ಣವನ್ನಾಗಿ ಪರಿವರ್ತಿಸುವ ಯೋಜನೆ ರೂಪಿಸಲಾಗಿತ್ತು. ಇದರ ವಿರುದ್ಧ ವೈ.ಎಸ್.ವಿ. ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು. ಜೊತೆಗೆ ನ್ಯಾಯಾಲಯದಲ್ಲಿ ದಾವೆ ಹೂಡಿ, ಆ ಸ್ಥಳವನ್ನು ನಗರ ಸಾರಿಗೆ ಬಸ್ ನಿಲ್ದಾಣವಾಗಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಎಚ್.ಆರ್. ನವೀನ್ ಕುಮಾರ್ ದಾಖಲಿಸಿದ್ದಾರೆ.
ಎಂಸಿಇ ಪ್ರಧಾನ ಕಾರ್ಯದರ್ಶಿ ಬಿ.ಕೆ. ಮಂಜುನಾಥ್ ಅವರು, 1983ರ ನಗರಸಭೆ ಚುನಾವಣೆಯಲ್ಲಿ ತಾವಿಬ್ಬರೂ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ಸಂದರ್ಭ ಹಾಗೂ ಬಳಿಕ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿದ್ದಾರೆ.
ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಅವರು, ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ವಿರೋಧಿಸಿ ರಾಜ್ಯದಾದ್ಯಂತ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಹಾಸನಕ್ಕೂ ಬಂದಿದ್ದರು. ಆಗ ಅವರನ್ನು ಪೊಲೀಸರು ಬಂಧಿಸಿ ಜಿಲ್ಲಾ ಕಾರಾಗೃಹದಲ್ಲಿರಿಸಿದ್ದರು. ಆ ಸಂದರ್ಭದಲ್ಲಿ ವೈ.ಎಸ್.ವಿ. ಅವರು ವಕೀಲರ ಮೂಲಕ ಜಾಮೀನು ಕೊಡಿಸಿ ಬಿಡುಗಡೆ ಮಾಡಿಸಿದ ಘಟನೆಯನ್ನು ವಾಟಾಳ್ ನಾಗರಾಜ್ ತಮ್ಮ ಲೇಖನದಲ್ಲಿ ನೆನಪಿಸಿಕೊಂಡಿದ್ದಾರೆ.
–
ಗೊರೂರು ಅನಂತರಾಜು, ಹಾಸನ
ಮೊ.: 94494 62879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್, ಹಾಸನ.
