ತುಮಕೂರು: ಕಾನೂನು ಪದವಿ ಪಡೆದು ವೃತ್ತಿ ಬದುಕು ಆರಂಭಿಸುವ ನೂತನ ವಕೀಲರಿಗೆ ವೃತ್ತಿ ಗೌರವದ ಜೊತೆಗೆ ಸಾಮಾಜಿಕ ಜವಾಬ್ದಾರಿಯೂ ಇರುತ್ತದೆ. ವೃತ್ತಿಯಲ್ಲಿ ಬದ್ಧತೆ, ನಿಷ್ಠೆ, ಜ್ಞಾನ ವೃದ್ಧಿಯ ಜೊತೆಗೆ ಅರ್ಪಣಾ ಮನೋಭಾವ ಬೆಳೆಸಿಕೊಂಡು ಸಾಮಾಜಿಕ ಪರಿಸರದಲ್ಲಿ ವೃತ್ತಿಗೌರವ ಹೆಚ್ಚಿಸಿಕೊಳ್ಳಬಹುದು.ತಮ್ಮ ವೈಯಕ್ತಿಕ ಬದುಕಿನ ಜೊತೆಗೆ ವೃತ್ತಿಯ ಶೇಕಡ 50ರಷ್ಟನ್ನು ಸಮಾಜದ ಸೇವೆಗಾಗಿ ಮುಡುಪಾಗಿಡಬೇಕು ಎಂದು ಹುಬ್ಬಳ್ಳಿಯ ರಾಜ್ಯಕಾನೂನು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ.ಬಸವರಾಜು ಹೇಳಿದರು.
ನಗರದ ವಿದ್ಯೋದಯ ಕಾನೂನು ಕಾಲೇಜಿನ ಪದವಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಕುಲಪತಿಗಳು, ಕಾನೂನು ಪದವಿ ಪಡೆದ ಮೇಲೆ ನೂರು ವಕೀಲರ ನಡುವೆ ತಾವು ಶ್ರೇಷ್ಠ ವಕೀಲರಾಗಿ ಬೆಳೆಯುವ ಪ್ರಯತ್ನ ಮಾಡಬೇಕು.ಅದಕ್ಕಾಗಿ ಪೂರಕ ಜ್ಞಾನ, ಬದ್ಧತೆಯನ್ನು ಅಳವಡಿಸಿಕೊಳ್ಳಬೇಕು.ವಕೀಲರು ಯಾವತ್ತೂ ಸಮಾಜಮುಖಿಗಳಾಗಬೇಕು.ಅಸಹಾಯಕರಿಗೆ ಕಾನೂನು ಮಾರ್ಗದರ್ಶನ ನೀಡುವ ಮೂಲಕ ಅವರಿಗೆ ನ್ಯಾಯ ಒದಗಿಸಿ ಸಮಾಜ ಪರಿವರ್ತನೆಗೂ ಸಹಕರಿಸಬೇಕು ಎಂದು ಸಲಹೆ ಮಾಡಿದರು.
ಹೆಚ್.ಎಸ್. ಶೇಷಾದ್ರಿ ಸ್ಮಾರಕ ಪ್ರಶಸ್ತಿ.
ವಿದ್ಯೋದಯ ಫೌಂಡಶನ್ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಹೆಚ್.ಎಸ್. ರಾಜು ಮಾತನಾಡಿ, ಹಿರಿಯ ನ್ಯಾಯವಾದಿ, ವಿದ್ಯೋದಯ ಕಾನೂನು ಕಾಲೇಜಿನ ಸಂಸ್ಥಾಪಕರಾದ ದಿ. ಪ್ರೊ.ಹೆಚ್.ಎಸ್. ಶೇಷಾದ್ರಿಯವರ ದೂರದೃಷ್ಟಿ, ಚಿಂತನೆಗಳನ್ನು ಸಂಸ್ಥೆಯಲ್ಲಿ ಸಾಕಾರಗೊಳಿಸಲಾಗುತ್ತಿದೆ.ಪ್ರತಿಭಾವಂತ ಕಾನೂನು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಹಾಗೂ ಇತರರಿಗೆ ಪ್ರೇರಣೆ ನೀಡಲು ಕಾನೂನು ಪದವಿಯಲ್ಲಿ ಮೊದಲ ರ್ಯಾಂಕ್ ಪುರಸ್ಕೃತರನ್ನು ಪ್ರೋತ್ಸಾಹಿಸಲು ರಾಜ್ಯಕಾನೂನು ವಿಶ್ವವಿದ್ಯಾಲಯದಲ್ಲಿ ಪ್ರೊ.ಹೆಚ್.ಎಸ್.ಶೇಷಾದ್ರಿ ಸ್ಮಾರಕ ದತ್ತಿ ಪ್ರಶಸ್ತಿ ಸ್ಥಾಪನೆ ಮಾಡಲಾಗುವುದು ಎಂದು ಹೆಚ್.ಎಸ್. ರಾಜು ಪ್ರಕಟಿಸಿದರು.
ಕಾಲೇಜಿನ ಪ್ರಚಾರ್ಯರಾದ ಶಮಾ ಸೈದಿ ಸ್ವಾಗತಕೋರಿ, ಡಾ.ಎ.ನಾರಾಯಣಸ್ವಾಮಿಯವರು ಪ್ರಾಸ್ತಾವಿಕ ನುಡಿಯಲ್ಲಿ, ಈ ಬಾರಿಕಾಲೇಜಿನ ಸುಮಾರು 240 ವಿದ್ಯಾರ್ಥಿಗಳಿಗೆ ಕಾನೂನು ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿದರು.
ಸಿಎಓ ಪ್ರೊ.ಕೆ.ಚಂದ್ರಣ್ಣ ಅಧ್ಯಕ್ಷತೆ ವಹಿಸಿದ್ದರು, ಟ್ರಸ್ಟಿಗಳಾದ ಕಸ್ತೂರಿರಮೇಶ್ ಪೈ, ಕೃಷ್ಣಯ್ಯ, ಆರ್.ಎ. ಸುರೇಶ್ಕುಮಾರ್, ಎನ್.ಜಿ. ಮಂಜುನಾಥ್, ಡಾ.ಎಸ್.ಗಂಗಾಧರ್, ಪ್ರೊ.ಕೆ.ವಿ.ರೂಪ, ಕೆ.ಎಸ್.ಪುಷ್ಪ, ಪ್ರೊ.ರಶ್ಮಿ ಹಾಗೂ ಕಾಲೇಜಿನ ಬೋಧಕ ವರ್ಗದವರು ಭಾಗವಹಿಸಿದ್ದರು.
– ಚಂದ್ರಚೂಡ ಕೆ.ಬಿ.
