ತುಮಕೂರು : ಇಂದು ಜೀವನ ಅಂಕಗಳ ಮೇಲೆ ನಿಂತಿಲ್ಲ. ಉತ್ತಮ ಅಂಕದ ಜೊತೆಗೆ,ಬದುಕಿಗೆ ಬೇಕಾದ ಜೀವನದ ಕೌಶಲ್ಯ ಕಲಿತು ಮಾನವೀಯ ಗುಣಗಳೊಂದಿಗೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳುವಂತೆ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಮುಖ್ಯಸ್ಥರಾದ ಡಾ.ಜಪಾನಂದಜೀ ಮಹಾರಾಜ್ ತಿಳಿಸಿದ್ದಾರೆ.
ನಗರದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್.ಘಟಕಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡುತಿದ್ದ ಅವರು,ತಂದೆ, ತಾಯಿ, ಗುರು, ಹಿರಿಯರನ್ನು ಗೌರವಿಸುವ, ಸಮಾಜದ ಬಗ್ಗೆ ಕಳಕಳಿ ಹೊಂದಿರುವ ಮಕ್ಕಳು ನೀವಾಗಬೇಕು ಎಂದು ಕಿವಿ ಮಾತು ಹೇಳಿದರು.
ಸುಮಾರು 120 ವರ್ಷಗಳ ಹಿಂದೆ ಆರಂಭವಾದ ಈ ಕಾಲೇಜಿಗೆ ತನ್ನದೇ ಆದ ಇತಿಹಾಸವಿದೆ.ತ್ರಿವಿಧ ದಾಸೋಹಿ ಡಾ.ಶ್ರೀಶಿವಕುಮಾರಸ್ವಾಮೀಜಿ,ವಿಜ್ಞಾನಿ ಡಾ.ರಾಜಾ ರಾಮಣ್ಣ,ವಿಜ್ಞಾನಿ ರ್ಯಾಂಕ್ ನಜೀರ್ ಕಲಿತ ಕಾಲೇಜು ಇದು. ಮಹಾತ್ಮಗಾಂಧಿ ಸ್ವಾತಂತ್ರ ಹೋರಾಟದ ಪ್ರವಾಸದ ವೇಳೆ ವಿಶ್ರಾಂತಿ ಪಡೆದ ಜಾಗವಿದೆ.ಈ ಕಾಲೇಜಿನ ಬಗ್ಗೆ ಮೊದಲು ನಿಮಗೆ ಹೆಮ್ಮೆ ಇರಲಿ.ದೇಶ ನಿಮಗೆ ಎಲ್ಲವನ್ನು ಕೊಟ್ಟಿದೆ.ಹಾಗಾಗಿ ನೀವು ದೇಶಕ್ಕಾಗಿ ಕೊಡುವಂತಹ ಮಕ್ಕಳಾಗಿ ತಯಾರಾಗಿ, ಶಾಲೆಯ ಸ್ವಚ್ಚತೆಯ ಜೊತೆಗೆ,ನಿಮ್ಮ ಮನಸ್ಸನ್ನು ಸ್ವಚ್ಚಗೊಳಿಸಿಕೊಳ್ಳಿ,ಈ ಕಾಲೇಜನ್ನು ಉಳಿಸಿ,ಬೆಳಸುವ ಜವಾಬ್ದಾರಿ ಪ್ರತಿ ವಿದ್ಯಾರ್ಥಿಯದು. ನಿಮ್ಮ ಕಲಿಕೆ ಮತ್ತಷ್ಟು ಸುಗಮ ಗೊಳಿಸಲು ನಮ್ಮ ಸಂಸ್ಥೆ ವತಿಯಿಂದ ಐದು ಲಕ್ಷ ರೂಗಳ ಸ್ಮಾರ್ಟ್ ಬೋರ್ಡನ್ನು ನೀಡುತ್ತಿದ್ದೇನೆ. ಇದರ ಸಮರ್ಥ ಬಳಕೆಯಾದರೆ ಮತ್ತೊಂದು ನೀಡುವುದಾಗಿ ಡಾ.ಶ್ರೀಜಪಾನಂದಜೀ ತಿಳಿಸಿದರು.
ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ನೂರು ವರ್ಷಗಳ ಇತಿಹಾಸವಿರುವ ಈ ಕಾಲೇಜಿನ ಭೌತಿಕ ಬೆಳವಣಿಗೆಯ ಜೊತೆಗೆ,ಭೌದ್ಧಿಕ ಬೆಳವಣಿಗೆಯ ಕಡೆಗೂ ಇಲಾಖೆ ಮತ್ತು ಕಾಲೇಜು ಸಿಬ್ಬಂದಿ ಗಮನಿಸಬೇಕಾಗಿದೆ.ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀಜಪಾನಂದಜೀ ಅವರು ಈ ಕಾಲೇಜಿಗೆ ಭೇಟಿ ಕೊಟ್ಟ ನಂತರ ಚಿತ್ರಣವೇ ಬದಲಾಗಿದೆ. ಮೂಲ ಭೂತ ಸೌಕರ್ಯದ ಜೊತೆಗೆ, ಶೈಕ್ಷಣಿಕ ಪ್ರಗತಿಗು ಶ್ರಮಿಸಿದ್ದಾರೆ. ಇನ್ಪೋಸಿಸ್ ಸಹಯೋಗದಲ್ಲಿ ಕುಡಿಯುವ ನೀರಿನ ಘಟಕ, ಶೌಚಾಲಯ ಹಾಗೂ ದಾನಿಗಳ ಸಹಾಯದಿಂದ ಮಧ್ಯಾಹ್ನದ ಬಿಸಿಯೂಟ ಸಹ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದೆ.ಶಿಕ್ಷಕರು ಪಠ್ಯದ ಹೊರತಾಗಿ, ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ತಯಾರು ಮಾಡುವಂತೆ ಸಲಹೆ ನೀಡಿದರು.
ಪಿಯು ಡಿಡಿಪಿಐ ರಾಧಾ.ಎಂ.ಎಸ್ ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಉದ್ಯಮಿ ಹೆಚ್.ಜಿ.ಚಂದ್ರಶೇಖರ್ ಪ್ರಾಂಶುಪಾಲರಾದ ರಾಜಕುಮಾರ್.ಎಸ್, ಮಾತನಾಡಿದರು.
ವೇದಿಕೆಯಲ್ಲಿ ಡಾ.ಆರ್.ಎಲ್.ರಮೇಶ್ ಬಾಬು, ಬಿ.ಆರ್.ನಟರಾಜಶೆಟ್ಟಿ, ವಸಂತಕುಮಾರ್, ಪುಷ್ಪಾವತಿ, ಆರ್, ಡಾ.ಲೋಕೇಶ್, ಜಿ.ಹೆಚ್,, ನಾಗರಾಜು.ಕೆ, ರವಿ.ಬಿ.ಆರ್, ಡಾ.ಗಂಗಾಂಭಿಕೆ.ಬಿ. ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
